ADVERTISEMENT

ಬ್ರಹ್ಮಾವರ: ಕುಸಿದ ನೀರಿನ ಮಟ್ಟ; ಕೃಷಿಕ ಕಂಗಾಲು

ನೀರು ಬತ್ತಿದ ಮೇಲೆ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಕೆ: ರೈತರ ಆರೋಪ

ಶೇಷಗಿರಿ ಭಟ್ಟ
Published 25 ಡಿಸೆಂಬರ್ 2025, 7:04 IST
Last Updated 25 ಡಿಸೆಂಬರ್ 2025, 7:04 IST
ಬ್ರಹ್ಮಾವರ ತಾಲ್ಲೂಕಿನ ಉಗ್ಗೇಲ್‌ಬೆಟ್ಟಿನಲ್ಲಿರುವ ಮಡಿಸಾಲು ಹೊಳೆಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು
ಬ್ರಹ್ಮಾವರ ತಾಲ್ಲೂಕಿನ ಉಗ್ಗೇಲ್‌ಬೆಟ್ಟಿನಲ್ಲಿರುವ ಮಡಿಸಾಲು ಹೊಳೆಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು   
ಸಾವಿರಾರು ಎಕರೆ ಕೃಷಿ ಭೂಮಿಗೆ ಬೇಕಿದೆ ನೀರು | ಏಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಕೊರತೆ ಎದುರಾಗುವ ಆತಂಕ

ಬ್ರಹ್ಮಾವರ: ಈ ಬಾರಿ ಮಳೆಗಾಲ ತಡವಾಗಿ ಮುಕ್ತಾಯಗೊಂಡರೂ, ಈಗಾಗಲೇ ನದಿಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ.  ಕಿಂಡಿ ಅಣೆಕಟ್ಟುಗಳಿಗೆ  ವಿಳಂಬವಾಗಿ ಡಿಸೆಂಬರ್‌ ತಿಂಗಳಿನಲ್ಲಿ ಹಲಗೆ ಅಳವಡಿಕೆ ಆಗಿದ್ದರಿಂದ ಮತ್ತಷ್ಟು ನೀರಿನ ಅಭಾವ ಎದುರಾಗಲಿದೆ.

ಒಂದೆಡೆ ನೀರಿನ ಕೊರತೆಯಾದರೆ, ಇನ್ನೊಂದೆಡೆ ಹಲಗೆ ಅಳವಡಿಕೆ ತಡವಾಗಿದ್ದರಿಂದ ಉಪ್ಪು ನೀರು ಬಂದು ಕೃಷಿಕರಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕಿನ ಉಪ್ಪೂರು ಮತ್ತು ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಗ್ಗೇಲ್‌ಬೆಟ್ಟಿನಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟಿನಿಂದ ಸಂಗ್ರಹವಾಗುವ ಸಿಹಿ ನೀರಿನಿಂದ ಸಾವಿರಾರು ಕೃಷಿಕರು ನೂರಾರು ಎಕರೆ ಕೃಷಿ ಭೂಮಿಯಲ್ಲಿ ಭತ್ತದ ಎರಡನೇ ಬೆಳೆ ಹಾಗೂ ಉದ್ದು, ಅವಡೆ ಮತ್ತು ತರಕಾರಿ, ಮೆಣಸಿನ ಕೃಷಿಯನ್ನು ಮಾಡುತ್ತಿದ್ದಾರೆ.

ADVERTISEMENT

ಕಿಂಡಿ ಅಣೆಕಟ್ಟಿನಿಂದ ಶೇಖರಣೆಗೊಳ್ಳುವ ನೀರಿನಿಂದ ಹೆರಂಜೆ, ಆರೂರು, ಹಾವಂಜೆ, ಮುಂತಾದ ಕಡೆಯ ರೈತರು ಪ್ರಯೋಜನ ಪಡೆದು ಮಿಶ್ರ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಆದರೆ ಈ ಬಾರಿ ಕಿಂಡಿ ಅಣೆಕಟ್ಟಿನಲ್ಲಿ ನೀರು ಕಡಿಮೆಯಾದ ಮೇಲೆ ಹಲಗೆ ಅಳವಡಿಸಿದ್ದರಿಂದ ನೀರಿನ ಶೇಖರಣೆ ಕಡಿಮೆಯಾಗಿದೆ ಎನ್ನುವ ಅಳಲು ಅಲ್ಲಿಯ ಕೃಷಿಕರದ್ದು.

‘ತಡವಾಗಿ ಹಲಗೆ ಅಳವಡಿಕೆ ಮಾಡಿದ್ದರಿಂದ ಉಪ್ಪು ನೀರು ಈಗಾಗಲೇ ಮೇಲೆ ಬಂದಿದ್ದು, ನೀರು ಗಡುಸಾಗಿದೆ. ನದಿ ತೀರದ ಗದ್ದೆಗಳಲ್ಲಿ ಭತ್ತದ ಕೃಷಿಯೊಂದಿಗೆ ತರಕಾರಿಗಳನ್ನು ಬೆಳೆಸಿಕೊಳ್ಳುತ್ತಿದ್ದು, ಉಪ್ಪು ಮಿಶ್ರಿತ ನೀರಿನಿಂದ ತರಕಾರಿ ಬೆಳೆ ಹಾಳಾಗುವ ಪರಿಸ್ಥಿತಿ ಬಂದೊದಗಬಹುದು. ಅಧಿಕಾರಿಗಳ ನಿರ್ಲಕ್ಷದಿಂದ ಕೃಷಿಕರು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ಆರೂರು ಗ್ರಾಮದ ಕೃಷಿಕ ಅನಂತ ಸೇರಿಗಾರ ‘ಪ್ರಜಾವಾಣಿಗೆ’ ತಿಳಿಸಿದರು.

‘ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದುಕೊಂಡವರ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದಾಗಿ ಇಂತಹ ಪರಿಸ್ಥಿತಿ ಉದ್ಭವವಾಗಿದೆ. ಮಳೆ ಮುಗಿದ ಬೆರಳೆಣಿಕೆಯ ದಿನಗಳಲ್ಲಿ ಹೊಳೆಯಲ್ಲಿ ನೀರಿನ ಹರಿವು ಕುಂಠಿತಗೊಳ್ಳುತ್ತಿದೆ. ಪರಿಸ್ಥಿತಿಯನ್ನು ಅವಲೋಕಿಸಿ ನೀರು ಶೇಖರಣೆಗೊಳ್ಳಲು ಹಲಗೆ ಅಳವಡಿಸುವ ಕಾರ್ಯಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ. ಈಗಾಗಲೇ ಉಪ್ಪುನೀರು ಒಳಗೆ ಬಂದಾಗಿದೆ. ಈ ಭಾಗದ ಬಾವಿ ಕೆರೆಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿದಿದ್ದು ಮುಂದೆ ಸಮಸ್ಯೆ ಖಚಿತ’ ಎಂದು ಉಪ್ಪೂರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ರಮೇಶ ಕರ್ಕೆರಾ ತಿಳಿಸಿದರು.

ನದಿಯಲ್ಲಿ ನೀರು ತುಂಬಿ ತುಳುಕುತ್ತಿದ್ದಾಗ ಹಲಗೆ ಹಾಕಿ ನೀರು ಶೇಖರಣೆ ಮಾಡಲಾಗುತ್ತಿತ್ತು. ಹಲಗೆ ಹಾಕಿದ ನಂತರವೂ ಹಲಗೆ ಮೇಲಿಂದ ಹೆಚ್ಚಿನ ನೀರು ಹೊರಗೆ ಹೋಗುತ್ತಿತ್ತು. ಆದರೆ ಈ ಬಾರಿ ಹಲಗೆಯ ತಳಪಾಯದಲ್ಲಿ ಮಾತ್ರ ನೀರಿದೆ. ಈಗಲೇ ಇಂತಹ ಸ್ಥಿತಿಯಾದರೆ ಮುಂದಿನ ಏಪ್ರಿಲ್‌, ಮೇ ತಿಂಗಳಲ್ಲಿ ಸ್ಥಿತಿ ಹೇಗಿರಬಹುದು ಎಂದು  ಸ್ಥಳೀಯರು ಪ್ರಶ್ನಿಸುತ್ತಾರೆ.

ಜಿಲ್ಲೆಯಾದ್ಯಂತ 1,500ಕ್ಕೂ ಹೆಚ್ಚು ದೊಡ್ಡ ಹಾಗೂ ಸಣ್ಣ ಕಿಂಡಿ ಅಣೆಕಟ್ಟುಗಳಿವೆ. ಆದರೆ ಅವುಗಳ ನಿರ್ವಹಣೆ ಸಮರ್ಪಕವಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಲೇ ಇವೆ. ಅಕಾಲಿಕವಾಗಿ ಮಳೆ ಬಾರದೆ ಇದ್ದರೆ ನವೆಂಬರ್, ಡಿಸೆಂಬರ್ ತಿಂಗಳ ಹೊತ್ತಿಗೆ ನದಿ, ಉಪನದಿ, ತೋಡುಗಳಲ್ಲಿ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತದೆ. ಅದಕ್ಕೂ ಮೊದಲು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಿದರೆ, ಹರಿದುಹೋಗುವ ನೀರನ್ನು ಸಂಗ್ರಹಿಸಿಡಬಹುದು.

ಆದರೆ ಸಂಬಂಧಪಟ್ಟವರು ಹಲಗೆ ಅಳವಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವುದು ಬಹುತೇಕ ಕೃಷಿಕರ ಆರೋಪವಾಗಿದೆ.

ಮಡಿಸಾಲು ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದು
ಸಮರ್ಪಕ ನಿರ್ವಹಣೆ ಮಾಡಲಾಗದಿದ್ದರೂ ಸಾಲು ಸಾಲು ಕಿಂಡಿ ಅಣೆಕಟ್ಟುಗಳು ಸಾವಿರಾರು ಕೋಟಿ ರೂಪಾಯಿ ಖರ್ಚಿನಲ್ಲಿ ಉಪ್ಪೂರು ಪರಿಸರದಲ್ಲಿ ನಿರ್ಮಾಣವಾಗುತ್ತಿರುವುದು ಸೋಜಿಗವೆನಿಸುತ್ತಿದೆ
ರಮೇಶ ಕರ್ಕೇರ ಉಗ್ಗೇಲ್‌ ಬೆಟ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.