ADVERTISEMENT

ಕೋಟೇಶ್ವರ: ಗ್ರಾಮಾಭಿವೃದ್ಧಿ ಯೋಜನೆಕುಂದಾಪುರ ಕಚೇರಿ-2 ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:16 IST
Last Updated 15 ನವೆಂಬರ್ 2022, 5:16 IST
ಕುಂದಾಪುರ ಸಮೀಪದ ಕೋಟೇಶ್ವರದ ಹಾಲಾಡಿ ರಸ್ತೆಯ ಗುರುಕೃಪಾ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಕಚೇರಿ-2 ಅನ್ನು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಉದ್ಘಾಟಿಸಿದರು
ಕುಂದಾಪುರ ಸಮೀಪದ ಕೋಟೇಶ್ವರದ ಹಾಲಾಡಿ ರಸ್ತೆಯ ಗುರುಕೃಪಾ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಕಚೇರಿ-2 ಅನ್ನು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಉದ್ಘಾಟಿಸಿದರು   

ಕುಂದಾಪುರ: ‘ಕೃಷಿ ಕಾರ್ಯದ ಬಳಕೆಗೆ ಯಂತ್ರಗಳ ಜೊತೆಗೆ ಅದನ್ನು ಬಳಸಲು ತಿಳಿದಿರುವ ಅನುಭವಿಗಳು ಬೇಕು. ಯಾಂತ್ರೀಕೃತ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿ ಈ ರೀತಿಯ ಕೃಷಿ ಕಾರ್ಯಕ್ಕೆ ಒತ್ತು ನೀಡಬೇಕಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಹೇಳಿದರು.

ಕೋಟೇಶ್ವರದ ಹಾಲಾಡಿ ರಸ್ತೆಯ ಗುರುಕೃಪಾ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಕಚೇರಿ-2 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಕಾಪು, ಹೆಬ್ರಿ ಸೇರಿದಂತೆ ಕುಂದಾಪುರ-2 ಸೇರ್ಪಡೆ ಮೂಲಕ ಈಗ 9 ಯೋಜನಾ ಕಚೇರಿಗಳಾಗಿದ್ದು, ತೆಕ್ಕಟ್ಟೆ, ಕೋಟೇಶ್ವರ, ಕಾಳಾವರ, ಸಿದ್ದಾಪುರ, ಹಾಲಾಡಿ, ಅಮಾಸೆಬೈಲು ವಲಯಗಳಿಗೆ ಪ್ರತ್ಯೇಕವಾಗಿ ಕುಂದಾಪುರ-2 ಕಚೇರಿ ತೆರೆಯಲಾಗಿದೆ ಎಂದು ಡಾ.ಎಲ್.ಎಚ್.ಮಂಜುನಾಥ್ ಹೇಳಿದರು.

ADVERTISEMENT

ರಾಜ್ಯದಲ್ಲಿ ಅತಿಹೆಚ್ಚು ಅಂದರೆ ಸುಮಾರು 7 ಸಾವಿರದಷ್ಟು ಸ್ವಸಹಾಯ ಸಂಘಗಳಿರುವ ಅವಿಭಜಿತ ಕುಂದಾಪುರ ತಾಲ್ಲೂಕಿನಲ್ಲಿಯೇ ರಾಜ್ಯದಲ್ಲಿ ಪ್ರಥಮ ರೈತ ಉತ್ಪಾದಕ ಕೇಂದ್ರ ಯಂತ್ರಶ್ರೀ ಆರಂಭವಾಗಿದೆ. ಈ ಯೋಜನೆಯಿಂದಾಗಿ ಪಾರಂಪರಿಕ ಭತ್ತ ಬೇಸಾಯಕ್ಕೆ ಯಂತ್ರಶಕ್ತಿ ಹೊಸ ಕಾಯಕಲ್ಪ ನೀಡಲಾಗಿತ್ತು. ಪ್ರಗತಿ ನಿಧಿ ಬಳಕೆಯಲ್ಲಿ ಈ ಪ್ರದೇಶ ಮುಂಚೂಣಿಯಲ್ಲಿ ಇದೆ. 2002ರಲ್ಲಿ ಕುಂದಾಪುರಕ್ಕೆ ನಗರ ಯೋಜನೆ ಮೂಲಕ ಕಾಲಿರಿಸಿ 2005ರಲ್ಲಿ ಗ್ರಾಮಾಂತರಕ್ಕೆ ವಿಸ್ತಾರಗೊಂಡ ಯೋಜನೆ ಇಂದು ಮನೆ ಮಾತಾಗಿದೆ ಎಂದರು.

ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್‌ ಶಂಕರ ಶೆಟ್ಟಿ, ಕಟ್ಟಡದ ಮಾಲೀಕ ರಮೇಶ್ ಪೂಜಾರಿ, ಜನಜಾಗೃತಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಪ್ರಗತಿಬಂಧು ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾಚಂದ್ರ ಇದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಲ್.ಎಚ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಸ್ವಾಗತಿಸಿದರು. ತಾಲ್ಲೂಕು ಯೋಜನಾಧಿಕಾರಿ ನಾರಾಯಣ ಪಾಲನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.