ADVERTISEMENT

ವಿಷುವತ್ ಸಂಕ್ರಾಂತಿ 21ರಂದು

ಭೂಮಿಯ ಮೇಲೆ ಹಗಲು ರಾತ್ರಿ ಒಂದೇ ಸಮನಾಗಿರುವ ವಿದ್ಯಮಾನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 12:42 IST
Last Updated 20 ಮಾರ್ಚ್ 2023, 12:42 IST
ಮಾರ್ಚ್‌ ಈಕ್ವಿನಾಕ್ಸ್‌
ಮಾರ್ಚ್‌ ಈಕ್ವಿನಾಕ್ಸ್‌   

ಉಡುಪಿ: ಖಗೋಳ ವಿದ್ಯಮಾನಗಳು ರಾತ್ರಿ ಆಕಾಶಕ್ಕೆ ಮಾತ್ರ ಸೀಮಿತವಲ್ಲ, ಕೆಲವು ವಿದ್ಯಮಾನಗಳನ್ನು ಹಗಲಿನ ಸಮಯದಲ್ಲೂ ಘಟಿಸುತ್ತವೆ. ಅಂತಹ ವಿಶೇಷ ವಿದ್ಯಮಾನ ವಸಂತ ವಿಷುವ (ವಿಷುವತ್ ಸಂಕ್ರಾಂತಿ) ಪ್ರತಿ ವರ್ಷ ಸಂಭವಿಸಲಿದ್ದು ಈ ವರ್ಷ ಮಾರ್ಚ್‌ 21ರಂದು ನಡೆಯಲಿದೆ

ಭೂಮಿ-ಸೂರ್ಯನ ಬಂಧನದಿಂದ ಸಂಭವಿಸುವ ವಿಷುವತ್ ಸಂಕ್ರಾಂತಿ ವಿಶೇಷ ಖಗೋಳ ವಿದ್ಯಮಾನವಾಗಿದ್ದು ಈ ದಿನದಂದು ಭೂಮಿಯ ಮೇಲೆ ಹಗಲು ಹಾಗೂ ರಾತ್ರಿಯ ಅವಧಿ ಒಂದೇ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ, ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಈ ವಿದ್ಯಮಾನ ಸಂಭವಿಸುತ್ತದೆ.

ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುತ್ತಾನೆ. ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತದೆ.

ADVERTISEMENT

ವಸಂತ ವಿಷುವತ್ ಸಂಕ್ರಾಂತಿಯ ದಿನ ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ ಉತ್ತರ ಗೋಳಾರ್ಧದಲ್ಲಿ ವಸಂತ ಋತು ಆರಂಭವಾಗುತ್ತದೆ. ಅಲ್ಲದೆ, ಸೂರ್ಯನ ಕೇಂದ್ರಬಿಂದುವು ದಿಗಂತದ ಮೇಲೆ 12 ಗಂಟೆಗಳ ಕಾಲ ಮತ್ತು ದಿಗಂತದ ಕೆಳಗೆ 12 ಗಂಟೆಗಳ ಕಾಲ ಇರುತ್ತದೆ.

ವಿಷುವತ್ ಸಂಕ್ರಾಂತಿ ದಿನದಂದು ನಾವಿರುವ ಸ್ಥಳದ ಅಕ್ಷಾಂಶವನ್ನು (ಲ್ಯಾಟಿಟ್ಯೂಡ್) ಕಂಡು ಹಿಡಿಯಬಹುದು. ಈ ಪ್ರಯೋಗವನ್ನು ವಿದ್ಯಾರ್ಥಿಗಳು ಸುಲಭವಾಗಿ ಮಾಡಬಹುದಾಗಿದೆ.‌

ಅಕ್ಷಾಂಶ ಕಂಡುಹಿಡಿಯುವುದು ಹೇಗೆ:

ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರ ಹೊಂದಿರುವ ವಸ್ತುವನ್ನು ನೆಲದ ಮೇಲೆ ನೇರವಾಗಿ ಇರಿಸಬೇಕು (ಮೇಣದ ಬತ್ತಿ, ಕೋಲು). ಆ ವಸ್ತುವಿನ ಅತಿ ಸಣ್ಣ ನೆರಳಿನ ಉದ್ದವನ್ನು ಅಳೆಯುವ ಮೂಲಕ ನಮ್ಮ ನೆರಳನ್ನೂ ಅಳೆಯಬಹುದು. ವಸ್ತು ಹಾಗೂ ಅದರ ನೆರಳಿನಿಂದ ಉಂಟಾಗುವ ಲಂಬಕೋನ ತ್ರಿಭುಜದಲ್ಲಿ ವಸ್ತುವು ತ್ರಿಭುಜದ ಅಡಿಪಾಯ ಎಂದು ಪರಿಗಣಿಸಿದರೆ, ಅದರ ನೆರಳು ತ್ರಿಭುಜದ ಅಭಿಮುಖ ಬಾಹು ಆಗಿರುತ್ತದೆ. ಈ ಎರಡು ಬಾಹುಗಳಿಂದಾದ ಕೋನವು ಸ್ಥಳದ ಅಕ್ಷಾಂಶವನ್ನು ನೀಡುತ್ತದೆ.

ಖಗೋಳ ಸಮಭಾಜಕವೃತ್ತವನ್ನು ಕ್ರಾಂತಿವೃತ್ತವು ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವತ್ ಬಿಂದುಗಳಾಗಿರುತ್ತವೆ. ಸೂರ್ಯನು ಈ ಬಿಂದುವನ್ನು ಸಂಕ್ರಮಿಸಿ, ಪ್ರತಿ ದಿನ ಆಕಾಶದಲ್ಲಿ ಉತ್ತರದ ಕಡೆ ಚಲಿಸುವುದನ್ನು ನೋಡಬಹುದು.

ವಿಶ್ವದಾದ್ಯಂತ ವಿಷುವತ್ ಸಂಕ್ರಾಂತಿಯನ್ನು ಮಾರ್ಚ್ ಈಕ್ವಿನಾಕ್ಸ್ ಎಂದು ಕರೆಯುತ್ತಾರೆ. ಭೂಗೋಳಾರ್ಧದ ಮೇಲ್ಭಾಗದವರು ಈ ದಿನವನ್ನು ವರ್ನಲ್ ಈಕ್ವಿನಾಕ್ಸ್ ಎಂದು ಕೂಡ ಕರೆಯುತ್ತಾರೆ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.