ADVERTISEMENT

ಉಡುಪಿ: ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ 8ರಿಂದ

ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್‌ ಪದವಿಪೂರ್ವ ಕಾಲೇಜಿನಲ್ಲಿ 3 ದಿನ ಟೂರ್ನಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 15:32 IST
Last Updated 6 ಡಿಸೆಂಬರ್ 2022, 15:32 IST

ಉಡುಪಿ: ಪವಿದ ಪೂರ್ವ ಶಿಕ್ಷಣ ಇಲಾಖೆ, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಜಂಟಿ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ ಡಿ.8ರಿಂದ 10ರವರೆಗೆ ಕುಂದಾಪುರ ತಾಲ್ಲೂಕಿನ ಸುಣ್ಣಾರಿಯ ಎಕ್ಸಲೆಂಟ್‌ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಶೆಟ್ಟಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯುತ್ತಿದ್ದು, ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳ 800 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಟೂರ್ನಿಯಲ್ಲಿ ವಿಜೇತರಾದ ತಂಡಗಳನ್ನು ಮುಂಬರುವ 19 ವರ್ಷದೊಳಗಿನ ಬಾಲಕ ಬಾಲಕಿಯರ ರಾಷ್ಟ್ರಮಟ್ಟದ ಟೂರ್ನಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಟೂರ್ನಿಗೆ 7 ವಾಲಿಬಾಲ್ ಅಂಕಣಗಳನ್ನು ಸಜ್ಜುಗೊಳಿಸಲಾಗಿದೆ. 100 ತಾಂತ್ರಿಕ ಅಧಿಕಾರಿಗಳು, 150 ಸ್ವಯಂ ಸೇವಕರು, ಪ್ರಾಂಶುಪಾಲರು ಹಾಗೂ ನೂರಾರು ಸಿಬ್ಬಂದಿ ಟೂರ್ನಿಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಸ್ಪರ್ಧಿಗಳಿಗೆ ವಾಸ್ತವ್ಯ ಹಾಗೂ ಊಟ, ಉಪಹಾರ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಡಿ.8ರಂದು ಮಧ್ಯಾಹ್ನ 3ಕ್ಕೆಕುಂದಾಪುರ ಬೋರ್ಡ್ ಹೈಸ್ಕೂಲ್‌ ಬಳಿಯಿಂದ ಪುರ ಮೆರವಣಿಗೆ ಹೊರಡಲಿದ್ದು, ಖ್ಯಾತ ವೈದ್ಯ ಉಮೇಶ್ ಪುತ್ರನ್ ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ವಾಲಿಬಾಲ್ ಟೂರ್ನಿ ಉದ್ಘಾಟಿಸಲಿದ್ದಾರೆ.

ಎಂ.ಎಂ.ಹೆಗ್ಡೆ ಎಜುಕೇಷನಲ್‌ ಹಾಗೂ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ ಧ್ವಜಾರೋಹಣ ಮಾಡಲಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. 10ರಂದು ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಕೆಯ ಉಪ ನಿರ್ದೇಶಕ ಮಾರುತಿ, ಜಿಲ್ಲಾ ಕ್ರೀಡಾ ಸಂಯೋಜಕ ದಿನೇಶ್ಕುಮಾರ್, ಸುಜ್ಞಾನ್ ಎಜುಕೇಷನ್ ಟ್ರಸ್ಟ್‌ ಖಜಾಂಚಿ ಭರತ್ ಶೆಟ್ಟಿ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ್ ಜೋಗಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಗಿರೀಶ್ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.