ADVERTISEMENT

ಬ್ರಹ್ಮಾವರ | ಐರೋಡಿ ಗ್ರಾಮಸ್ಥರಿಂದ ನೀರಿಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 6:51 IST
Last Updated 8 ಫೆಬ್ರುವರಿ 2026, 6:51 IST
ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್‌ನಲ್ಲಿ ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್‌ನಲ್ಲಿ ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.   

ಬ್ರಹ್ಮಾವರ: ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್‌ನಲ್ಲಿ ಎರಡು ದಿನಗಳಿಂದ ಪಂಚಾಯಿತಿ ವತಿಯಿಂದ ನಲ್ಲಿ ನೀರು ಬಿಡದೆ ಇರುವ ಕಾರಣ ಗ್ರಾಮಸ್ಥರು ಆಕ್ರೋಶಗೊಂಡು ಶನಿವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಂಚಾಯಿತಿಯ ಪಂಪ್‌ ಆಪರೇಟರ್‌ ಮದ್ಯಪಾನ ಮಾಡಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದೆ ನೀರನ್ನು ಬಿಡುತ್ತಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪಂಚಾಯಿತಿ ಸದಸ್ಯರಾದ ಶಿವರಾಮ ಶ್ರೀಯಾನ್‌, ನಟರಾಜ ಗಾಣಿಗ ಮಾತನಾಡಿ, ಇಲ್ಲಿಯ ಸಮಸ್ಯೆಯ ಬಗ್ಗೆ ಪಂಚಾಯಿತಿ ಗಮನಕ್ಕೂ ತರಲಾಗಿದೆ. ಪಂಪ್‌ ಆಪರೇಟರ್‌ಗೆ ಹಲವು ಅವಕಾಶಗಳನ್ನು ನೀಡಲಾಗಿದೆ, ಆದರೂ ಸುಧಾರಿಸಿಲ್ಲ. ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಅವರನ್ನು ತೆಗೆದು ಹಾಕಿ ಬೇರೆ ಆಪರೇಟರ್‌ ನೇಮಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಪಿಡಿಒ ಅವರು ಆತನನ್ನು ತೆಗೆದು ಹಾಕದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ನಾವು ಸಿಇಒ ಅವರಿಗೆ ದೂರು ನೀಡುತ್ತೇವೆ ಎಂದರು.

ADVERTISEMENT

ಗ್ರಾಮದ ಸಂತ್ರಸ್ತ ಮಹಿಳೆ ಮಾತನಾಡಿ, ನಮಗೆ ಕುಡಿಯುವುದಕ್ಕೂ ನೀರಿಲ್ಲ. ಬಾವಿ ಇದ್ದರೆ ನಾವು ಪಂಚಾಯಿತಿ ನೀರಿಗೆ ಅವಲಂಬಿತವಾಬೇಕಿಲ‌್ಲ. ನಮ್ಮ ಬಾವಿಯಲ್ಲಿ ಉಪ್ಪು ನೀರು ಬರುವುದರಿಂದ ಕುಡಿಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಪಂಚಾಯಿತಿ ನೀರನ್ನೇ ಅವಲಂಬಿಸಬೇಕಾಗಿದೆ. ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಪಂಚಾಯಿತಿಯಿಂದ ನೀರಿನ ಬಿಲ್ ಸಂಗ್ರಹಿಸಲಾಗುತ್ತದೆ, ಆದರೆ ನೀರು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿ ಕಾರ್ಯದರ್ಶಿ ವಿಜಯ ಕುಮಾರಿ ಮಾತನಾಡಿ, ಪಂಪ್‌ ಆಪರೇಟರ್‌ ಕುಡಿದು ಬಂದು ಕೆಲಸಕ್ಕೆ ಬರುವುದರಿಂದ ಈ ಸಮಸ್ಯೆ ಆಗುತ್ತಿದೆ. ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಅವರ ಕುಟುಂಬಸ್ಥರು ಅವರ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುವುದಾಗಿ ಹೇಳಿದ್ದರಿಂದ ಸುಮ್ಮನಿದ್ದೆವು. ಈಗ 15 ದಿನ ಕೆಲಸಕ್ಕೆ ಬಂದು, ಹದಿನೈದು ಗೈರು ಹಾಜಾಗುವುದು ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ತಾತ್ಕಾಲಿಕವಾಗಿ ಬೇರೆ ಪಂಪ್‌ ಆಪರೇಟರ್‌ ಅವರನ್ನು ನೇಮಿಸಿಕೊಂಡು ನೀರು ಸರಬರಾಜು ಮಾಡಲಾಗುವುದು ಎಂದರು.

ಮಧ್ಯಾಹ್ನದ ಒಳಗೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದ ಬಳಿಕ ಸಾರ್ವಜನಿಕರು ಪ್ರತಿಭಟನೆ ಹಿಂತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.