
ಉಡುಪಿ: ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ಕೃಷಿ ಯಂತ್ರೋಪಕರಣಗಳ ದುಬಾರಿ ಬಾಡಿಗೆ ಮೊದಲಾದವುಗಳಿಂದ ಬಸವಳಿದಿರುವ ಜಿಲ್ಲೆಯ ರೈತರು ಇದೀಗ ಕಾಡು ಪ್ರಾಣಿಗಳ ಹಾವಳಿಯೂ ಮಿತಿಮೀರಿರುವುದರಿಂದ ಕಂಗೆಟ್ಟಿದ್ದಾರೆ.
ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಮಾತ್ರವಲ್ಲದೆ ಇತರೆಡೆಗಳಲ್ಲೂ ಕಾಡು ಪ್ರಾಣಿಗಳು ಕೃಷಿನಾಶ ಮಾಡುತ್ತಿವೆ. ಕಾಡುಕೋಣ, ಮಂಗ, ನವಿಲು, ಕಾಡು ಹಂದಿ, ಕೆಂಚಳಿಲುಗಳು ಕೃಷಿ ಪ್ರದೇಶಗಳತ್ತ ಬರುತ್ತಿರುವುದು ರೈತರ ನೆಮ್ಮದಿ ಕೆಡಿಸಿದೆ.
ಕಾಡುಕೋಣಗಳು ಭತ್ತದ ಕೃಷಿ ನಾಶ ಮಾಡಿದರೆ, ಮಂಗ ಮತ್ತು ಕೆಂಚಳಿಲುಗಳು ತೆಂಗಿನ ಕೃಷಿಗೆ ಹಾನಿಯುಂಟು ಮಾಡುತ್ತಿವೆ. ಕಾಡು ಹಂದಿಗಳು ತರಕಾರಿ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ ಎನ್ನುತ್ತಾರೆ ರೈತರು.
ಜಿಲ್ಲೆಯ ಕೆಲವೆಡೆ ಅಕ್ಟೋಬರ್ ತಿಂಗಳಲ್ಲಿ ಭತ್ತದ ಮೊದಲ ಬೆಳೆಯ ಕಟಾವು ಮುಗಿದು, ನವೆಂಬರ್ ವೇಳೆಗೆ ಎರಡನೇ ಬೆಳೆಗೆ ಬಿತ್ತನೆ ನಡೆಯುತ್ತದೆ. ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿರುವುದರಿಂದ ಹೆಚ್ಚಿನ ರೈತರು ಭತ್ತದ ಎರಡನೇ ಬೆಳೆಯನ್ನೇ ಕೈಬಿಟ್ಟಿದ್ದಾರೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಸೇರಿದಂತೆ ವಿವಿಧೆಡೆ ಅರಣ್ಯದಲ್ಲಿ ಹಣ್ಣಿನ ಮರಗಳ ನಾಶ, ಅಭಿವೃದ್ದಿ ಹೆಸರಿನಲ್ಲಿ ಅರಣ್ಯ ನಾಶವಾಗುತ್ತಿರುವುದರಿಂದ ಕಾಡುಪ್ರಾಣಿಗಳ ಆವಾಸಸ್ಥಾನಗಳಿಗೆ ಧಕ್ಕೆಯಾಗಿ ಅವುಗಳು ಆಹಾರ ಹುಡುಕಿಕೊಂಡು ಹಳ್ಳಿಗಳತ್ತ ಬರುತ್ತವೆ ಎನ್ನುತ್ತಾರೆ ಕೃಷಿಕರು.
ಚಿರತೆಗಳು ಬಾವಿಗೆ ಬೀಳುವ ಪ್ರಕರಣಗಳೂ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಅವುಗಳು ಆಹಾರ ಹುಡುಕಿಕೊಂಡು ನಗರಪ್ರದೇಶಗಳ ಸಮೀಪವೂ ಬರುತ್ತಿವೆ ಎಂದೂ ಹೇಳುತ್ತಾರೆ.
ಮಂಗಗಳು ತೆಂಗಿನ ಮರಕ್ಕೆ ಹತ್ತಿ ಎಳೆಯ ಕಾಯಿಗಳನ್ನು ಕಿತ್ತು ಹಾಕುತ್ತಿವೆ. ಅವುಗಳ ಹಾವಳಿಯಿಂದ ಫಸಲೇ ಕೈಗೆ ಸಿಗುತ್ತಿಲ್ಲ. ಪಟಾಕಿ ಹೊಡೆದರೂ ಅವುಗಳಿಗೆ ಭಯ ಇಲ್ಲದಂತಾಗಿದೆ ಎಂದು ಕೆಲವು ರೈತರು ದೂರಿದ್ದಾರೆ. ಅರಣ್ಯ ಇಲಾಖೆಯವರು ಕಾಡುಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಹಾಗಾದರೆ ಮಂಗ ಮೊದಲಾದ ಪ್ರಾಣಿಗಳು ನಾಡಿಗೆ ಬರುವುದು ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೂರಕ ಮಾಹಿತಿ: ಸುಕುಮಾರ್ ಮುನಿಯಾಲು, ವಾಸುದೇವ ಭಟ್
‘ಪರಿಹಾರ ವಿತರಿಸಲಾಗುತ್ತದೆ’
ಕಾಡುಪ್ರಾಣಿಗಳಿಂದಾಗಿ ಬೆಳೆ ನಾಶವಾದರೆ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಕೂಡಲೇ ಪರಿಹಾರ ನೀಡಲಾಗುತ್ತಿದೆ ಎಂದು ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ತಿಳಿಸಿದರು. ಅರಣ್ಯದಂಚಿನ ಗ್ರಾಮಗಳಲ್ಲಿ ಮಾನವ– ಪ್ರಾಣಿ ಸಂಘರ್ಷ ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಜಿಲ್ಲೆಯಲ್ಲಿ ಮಂಗಗಳ ಹಾವಳಿ ಜಾಸ್ತಿಯಾಗಿದೆ ಎಂದು ರೈತರು ದೂರುತ್ತಿದ್ದಾರೆ. ದ್ವೀಪವೊಂದರಲ್ಲಿ ಮಂಕಿ ಪಾರ್ಕ್ ಮಾಡುವ ಪ್ರಸ್ತಾವ ಹಿಂದೆ ಇತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಮಂಗಗಳ ಉಪಟಳ ಅತಿಯಾದರೆ ಅವುಗಳನ್ನು ಹಿಡಿದು ದಟ್ಟ ಕಾಡು ಪ್ರದೇಶಗಳಿಗೆ ಬಿಡಲಾಗುತ್ತಿದೆ ಎಂದು ಅವರು ಹೇಳಿದರು.
‘ಮಂಕಿ ಪಾರ್ಕ್ ಬೇಡಿಕೆಗೆ ಸ್ಪಂದಿಸುತ್ತಿಲ್ಲ’
ಮಂಗಗಳ ಹಾವಳಿ ವಿಪರೀತವಾಗಿರುವುದರಿಂದ ಜಿಲ್ಲೆಯ ರೈತರಿಗೆ ಸಮಸ್ಯೆಯಾಗುತ್ತಿದೆ. ಅವುಗಳ ಹಾವಳಿ ನಿಯಂತ್ರಿಸಲು ಮಂಕಿ ಪಾರ್ಕ್ ನಿರ್ಮಿಸಿ ಎಂದು ನಾವು ಆಗ್ರಹಿಸಿದರೂ ಸಂಬಂಧಪಟ್ಟವರು ಯಾರೂ ಸ್ಪಂದಿಸಿಲ್ಲ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ತಿಳಿಸಿದರು. ನವಿಲುಗಳು ಭತ್ತದ ಕೃಷಿಗೆ ಹಾನಿ ಮಾಡುತ್ತವೆ. ಕಾಡು ಹಂದಿಗಳ ಹಾವಳಿಯೂ ಅತಿಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಹೆಚ್ಚಾಗಿದೆ ಕೆಂಚಳಿಲು ಕಾಟ
ಹೆಬ್ರಿ: ಹೆಬ್ರಿ ವ್ಯಾಪ್ತಿಯಲ್ಲಿ ಕೆಂಚಳಿಲು ಕಾಟ ಅಧಿಕವಾಗಿದ್ದು ತೆಂಗು ಬೆಳೆಗಾರರಿಗೆ ಸಂಕಷ್ಟ ಉಂಟಾಗಿದೆ. ಸದ್ದಿಲ್ಲದೆ ತೆಂಗಿನ ಮರಕ್ಕೆ ಬರುವ ಕೆಂಚಳಿಲು ಒಮ್ಮೆ ಬಂದರೆ ನಾಲ್ಕೈದು ಸಿಯಾಳಗಳನ್ನು ತಿನ್ನುತ್ತದೆ. ಕೆಂಚಳಿಲು ದಾಳಿ ಈ ಭಾಗದ ತೆಂಗು ಬೆಳೆಗಾರರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ತೆಂಗಿನ ಮರಕ್ಕೆ ಬಂದರೆ ಅವುಗಳನ್ನು ಓಡಿಸಲು ಕೂಡ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತರು. ಕೆಂಚಳಿಲು ತೆಂಗಿನ ಮರಕ್ಕೆ ಲಗ್ಗೆಯಿಡುವುದರಿಂದ ತೆಂಗು ಬೆಳೆಗಾರರಿಗೆ ಅಪಾರ ನಷ್ಟವಾಗುತ್ತಿದೆ. ರೈತರಿಗೆ ಎಲ್ಲಾ ರೀತಿಯಲ್ಲೂ ನಿರಂತರವಾಗಿ ಹೇಳತೀರದ ಸಂಕಷ್ಟವೇ ಎದುರಾಗುತ್ತಿದೆ ಎಂದು ಹೇಳುತ್ತಾರೆ.
ಕಾಡು ಹಂದಿ ಕಾಡುಕೋಣ ಕಾಟ
ಕಾರ್ಕಳ: ತಾಲ್ಲೂಕಿನಾದ್ಯಂತ ಅಡಿಕೆ ತೆಂಗು ಬಾಳೆ ಮುಂತಾದ ಸಾರ್ವಕಾಲಿಕ ಬೆಳೆಗಳನ್ನು ಮತ್ತು ಭತ್ತ ಅನಾನಸು ಕಲ್ಲಂಗಡಿ ಹಾಗೂ ತರಕಾರಿ ಮುಂತಾದ ಋತು ಆಧಾರಿತ ಬೆಳೆಗಳನ್ನೂ ಬೆಳೆಯಲಾಗುತ್ತಿದ್ದು ಕಾಡಿನಂಚಿನ ಬೆಳೆಗಳಿಗೆ ಕಾಡು ಹಂದಿ ಕಾಡುಕೋಣಗಳ ಕಾಟ ವಿಪರೀತವಾಗಿದೆ ಎಂದು ರೈತರು ದೂರಿದ್ದಾರೆ. ಇರ್ವತ್ತೂರು ರೆಂಜಾಳ ಸಾಣೂರು ಮುಂಡ್ಕೂರು ಮುಂತಾದೆಡೆ ಭತ್ತ ಬೆಳೆಯಲಾಗುತ್ತಿದೆ. ಕಾಂತಾವರ ಈದು ಮುಂತಾದೆಡೆ ಕಲ್ಲಂಗಡಿ ಅನಾನಸು ಬೆಳೆಯಲಾಗುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.