ADVERTISEMENT

ಅಸ್ಸಾಂ ಮುಖ್ಯಮಂತ್ರಿಯಿಂದ ತುಳು ಭಾಷೆಗೆ ಸ್ಥಾನಮಾನಕ್ಕಾಗಿ ಹಾರೈಕೆ ಪತ್ರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 13:16 IST
Last Updated 13 ಆಗಸ್ಟ್ 2023, 13:16 IST
ಡಿ.ಹಿಮಂತ ಬಿಸ್ವಾ ಶರ್ಮಾ
ಡಿ.ಹಿಮಂತ ಬಿಸ್ವಾ ಶರ್ಮಾ   

ಹೆಬ್ರಿ : ಜೈ ತುಲುನಾಡ್ ಸಂಘಟನೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ‘ತುಲುಪುರ್ಪ’ ಕವನ ಸಂಕಲನ ಕೃತಿಯನ್ನು ಶ್ಲಾಘಿಸಿ ಅಸ್ಸಾಂ ಮುಖ್ಯಮಂತ್ರಿ ಡಿ.ಹಿಮಂತ ಬಿಸ್ವಾ ಶರ್ಮಾ ಸಂಘಟನೆಯ ಅಧ್ಯಕ್ಷರಿಗೆ ಪತ್ರವನ್ನು ಬರೆದಿದ್ದಾರೆ.

ದೇಶದಾದ್ಯಂತ ತುಳು ಭಾಷೆಯನ್ನು ಪರಿಚಯಿಸುವ ಹಾಗೂ ಭಾಷೆಗೆ ಮಾನ್ಯತೆ ದೊರಕಿಸಿಕೊಡುವಲ್ಲಿ ಸಹಕಾರ ಕೋರಿ ಕೃತಿಯನ್ನು ಪ್ರಧಾನಿ, ರಾಷ್ಟ್ರಪತಿ, ಹಾಗೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದ್ದು, ಇದೀಗ ಕೃತಿ ಸ್ವೀಕರಿಸಿದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆ ಬಂದಿರುವುದು ಸಂತಸ ತಂದಿದೆ.

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಹಲವು ಭಾಷೆಗಳಿವೆ, ಪಂಚ ಮಹಾದ್ರಾವಿಡ ಭಾಷೆಗಳಲ್ಲಿ ತುಳುಭಾಷೆಯೂ ಒಂದು, ನಮ್ಮ ಐಕ್ಯತೆಯನ್ನು ಸಧೃಡಗೊಳಿಸುವಲ್ಲಿ ಭಾಷೆಗಳು ಆಧಾರ ಸ್ತಂಭಗಳಾಗಿವೆ. ತುಳು ಭಾಷೆಗೆ ಮಾನ್ಯತೆ ದೊರೆಯಬೇಕು. ಈ ನಿಟ್ಟಿನಲ್ಲಿ ಜೈ ತುಳುನಾಡ್‌ನ ಕಾರ್ಯ ಶ್ಲಾಘನೀಯವೆಂದು ಪ್ರತಿಕ್ರಿಯಿಸಿದ್ದಾರೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.

ADVERTISEMENT

ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ತುಳು ಭಾಷೆ, ಸಂಸ್ಕೃತಿ, ತುಳು ಲಿಪಿಯ ಉಳಿವಿಗಾಗಿ ಹತ್ತು ಹಲವಾರು ಕೆಲಸಗಳನ್ನು ಮಾಡುತ್ತಾ ಬಂದಿದೆ. ಪಂಚ ಮಹಾ ದ್ರಾವಿಡ ಭಾಷೆಗಳಲ್ಲಿ ಹಿರಿಯ ಭಾಷೆಯೆನಿಸಿದ ತುಳುಭಾಷೆಯು ತುಳುನಾಡಿನಲ್ಲಿ ಅಧಿಕೃತ ಪ್ರಾದೇಶಿಕ ಭಾಷೆಯಾಗಬೇಕು. ತುಳುವರು ತಮ್ಮ ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುವಂತಾಗಬೇಕು, ತುಳು ಭಾಷೆಗೆ ನಮ್ಮ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನಮಾನ ಲಭಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಜೈ ತುಳುನಾಡ್ ಸಂಘಟನೆಯು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ.

ತುಳುಪುರ್ಪ ಕೃತಿಯ ಸಂಪಾದಕೀಯ ಬಳಗದಲ್ಲಿ ಸಂಘಟನೆಯ 2022-23ನೇ ಸಾಲಿನ ಸಮಿತಿಯ ಅಧ್ಯಕ್ಷ ಅಶ್ವಥ್ ತುಲುವೆ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಮುಕ್ಕ, 2022 -23ನೇ ಸಾಲಿನ ತುಳು ಸಾಹಿತ್ಯ ಸಮಿತಿಯ ಮೇಲ್ವಿಚಾರಕ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ, ಸಹ ಮೇಲ್ವಿಚಾರಕ ಗೀತಾ ಲಕ್ಷ್ಮೀಶ್, ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಕಿರಣ್ ತುಲುವ, ನಿಶ್ಚಿತ್ ಜಿ ರಾಮಕುಂಜ, ಜಗದೀಶ್ ಗೌಡ ಕಲ್ಕಲ, ಯತೀಶ್ ಕುಮಾರ್, ಪ್ರಚಾರ ಸಮಿತಿಯ ಮೇಲ್ವಿಚಾರಕರಾದ ವಿನಯ್ ರೈ, ಸುಮಂತ್ ಹೆಬ್ರಿ, ಸಂಜನಾ ಪೂಜಾರಿ, ಪೃಥ್ವಿ ತುಲುವೆ, ರಂಜನ್ ಎಸ್ ವೈ ಬೆಳ್ತಂಗಡಿ, ಶರತ್ ಕೊಡವೂರು, ಶಶಿಕಲಾ, ಪ್ರಜ್ಞಾ, ಪ್ರಹ್ಲಾದ್ ತಂತ್ರಿ ಸೇರಿದಂತೆ ಹಲವರು ಕೃತಿಯನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿದ್ದಾರೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಡಿ.ಹಿಮಂತ ಬಿಸ್ವಾ ಶರ್ಮಾ ಸಂಘಟನೆಯ ಅಧ್ಯಕ್ಷರಿಗೆ ಬರೆದಿರುವ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.