ಬಂಧನ
(ಪ್ರಾತಿನಿಧಿಕ ಚಿತ್ರ)
ಉಡುಪಿ: ಮಹಿಳೆಯೊಬ್ಬರನ್ನು ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಮಲ್ಪೆ ಬಂದರಿನಲ್ಲಿ ಥಳಿಸಲಾಗಿದೆ.
ಈ ಸಂಬಂಧ ಸ್ಥಳೀಯರಾದ ಲಕ್ಷ್ಮಿ, ಸುಂದರ್, ಶಿಲ್ಪಾ ಎಂಬುವವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಶಂಕಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
‘ವಿಡಿಯೊ ದೃಶ್ಯಾವಳಿ ನೋಡಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಪತ್ತೆ ಹಚ್ಚಲಾಗಿದೆ. ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಮಹಿಳೆಯನ್ನು ಮಾ. 18ರಂದು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದು, ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಬಳಿಕ ಮಲ್ಪೆ ಪೊಲೀಸರು ಪ್ರಕರಣ
ದಾಖಲಿಸಿಕೊಂಡಿದ್ದರು.
ಮಹಿಳೆಯನ್ನು ಇನ್ನೊಬ್ಬ ಮಹಿಳೆ ನಿಂದಿಸಿ, ಕಪಾಳಕ್ಕೆ ಹೊಡೆದಿರುವುದು ಹಾಗೂ ಬಳಿಕ ಮರಕ್ಕೆ ಕಟ್ಟಿ ಹಾಕಿ ಥಳಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಹಲ್ಲೆ ನಡೆಸುತ್ತಿರುವ ವೇಳೆ ಸುತ್ತಲೂ ಜನರು ಸೇರಿದ್ದು, ಯಾರೊಬ್ಬರೂ ಅವರ ಸಹಾಯಕ್ಕೆ ಬಾರದಿರುವುದು ವಿಡಿಯೊ ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ಹಲ್ಲೆಗೊಳಗಾಗಿರುವ ಮಹಿಳೆ ಐದು ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಬೋಟ್‌ನಿಂದ ಮೀನನ್ನು ಬುಟ್ಟಿಯಲ್ಲಿ ತುಂಬಿಸಿ ಹೊರುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
‘ಮಲ್ಪೆ ಬಂದರಿನಲ್ಲಿ ಬೋಟ್‌ನಿಂದ ಮೀನು ಖಾಲಿ ಮಾಡಿ ಒಂದು ಬುಟ್ಟಿಯಲ್ಲಿ ಸಾರಿಗಾಗಿ ಸಿಗಡಿ ಮೀನನ್ನು ಒಯ್ಯುತ್ತಿದ್ದಾಗ ಕೋಪಗೊಂಡ ಲಕ್ಷ್ಮಿ, ಶಿಲ್ಪ, ಚಂದ್ರ, ಸುಂದರ ಮತ್ತು ಇತರ ಕೆಲವರು ತಡೆದು ನಿಲ್ಲಿಸಿದ್ದಾರೆ. ‘ಎಲ್ಲಿಂದಲೋ ನಮ್ಮ ಊರಿಗೆ ಬಂದು, ನಮ್ಮ ಮೀನು ತೆಗೆದುಕೊಂಡು ಹೋಗುತ್ತೀಯಾ ಎಂದು ನಿಂದಿಸಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
‘ಬಳಿಕ ಆರೋಪಿಗಳು ಮೈಮೇಲೆ ಕೈಹಾಕಿ ಎಳೆದಾಡಿ, ಮರಕ್ಕೆ ಹಗ್ಗದಿಂದ ಕಟ್ಟಿಹಾಕಿದ್ದರು. ಲಕ್ಷ್ಮಿ ಮತ್ತು ಸುಂದರ ಅವರು ಕೈಯಿಂದ ಕೆನ್ನೆಗೆ, ಮೈಮೇಲೆ ಹೊಡೆದಿದ್ದಾರೆ’ ಎಂದೂ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಯಾರು ಏನೇ ತಪ್ಪು ಮಾಡಿದರೂ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇನ್ನೊಮ್ಮೆ ಇಂತಹ ಘಟನೆ ನಡೆಯಬಾರದುಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ
ಘಟನೆಯನ್ನು ಖಂಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಕೈಕಾಲು ಕಟ್ಟಿ ಮಹಿಳೆ ಮೇಲೆ ಹಲ್ಲೆ ಮಾಡುವುದು ಅಮಾನವೀಯ. ಮಾಹಿತಿ ಬಂದ ತಕ್ಷಣ ಅಧಿಕಾರಿಗಳ ಜೊತೆ ಮಾತನಾಡಿ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.