ADVERTISEMENT

ಮಹಿಳಾ ನಿಲಯ: ಹಸೆಮಣೆ ಏರಿದ ನವಜೋಡಿ

ವಧುಗಳನ್ನು ಧಾರೆ ಎರೆದು ಕೊಟ್ಟ ಜಿಲ್ಲಾಧಿಕಾರಿ: ಶುಭ ಹಾರೈಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:19 IST
Last Updated 13 ಡಿಸೆಂಬರ್ 2025, 4:19 IST
ನಿಟ್ಟೂರು ಮಹಿಳಾ ನಿಲಯದಲ್ಲಿ ಮಲ್ಲೇಶ್ವರಿ– ಸಂಜಯ ಪ್ರಭು, ನಾಗರಾಜ– ಸುಶೀಲಾ ಅವರ ವಿವಾಹ ನೆರವೇರಿತು
ನಿಟ್ಟೂರು ಮಹಿಳಾ ನಿಲಯದಲ್ಲಿ ಮಲ್ಲೇಶ್ವರಿ– ಸಂಜಯ ಪ್ರಭು, ನಾಗರಾಜ– ಸುಶೀಲಾ ಅವರ ವಿವಾಹ ನೆರವೇರಿತು   

ಉಡುಪಿ: ಹೂವಿನ ಅಲಂಕಾರದಿಂದ ಸಿಂಗಾರಗೊಂಡ ಕಟ್ಟಡ, ರಂಗೋಲಿಯ ಚಿತ್ತಾರ, ನಗುಮೊಗದಿಂದ ಅತಿಥಿಗಳನ್ನು ಸ್ವಾಗತಿಸಿದ ಅಧಿಕಾರಿಗಳು. ಎಲ್ಲರಲ್ಲೂ ಸಂತಸ, ಸಡಗರ...

ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯವು ಇಂತಹ ಅಪರೂಪದ ಸಮಾರಂಭಕ್ಕೆ ಶುಕ್ರವಾರ ಸಾಕ್ಷಿಯಾಯಿತು. ಮಹಿಳಾ ನಿಲಯದ ನಿವಾಸಿ ಸುಶೀಲಾ ಅವರ ವಿವಾಹವು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಮಲ್ಲಪ್ಪ ಅವರ ಪುತ್ರ ನಾಗರಾಜ ಅವರೊಂದಿಗೂ ಮಲ್ಲೇಶ್ವರಿ ಅವರ ವಿವಾಹವು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡಿನ ಸತೀಶ್ ಪ್ರಭು ಅವರ ಪುತ್ರ ಸಂಜಯ ಪ್ರಭು ಅವರೊಂದಿಗೆ ನೆರವೇರಿತು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ವಧುಗಳನ್ನು ಧಾರೆ ಎರೆದುಕೊಟ್ಟರು. ಡಿವೈಎಸ್‌ಪಿ ಪ್ರಭು ಡಿ.ಟಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನಿ ಮತ್ತಿತರರು ಹಿರಿಯರ ಸ್ಥಾನದಲ್ಲಿ ನಿಂತು ಹರಸಿದರು.

ADVERTISEMENT

ಮೂಲತಃ ಬಳ್ಳಾರಿ ಜಿಲ್ಲೆಯ ಮಲ್ಲೇಶ್ವರಿ ಅವರು 18 ವರ್ಷ ಪೂರ್ಣಗೊಂಡ ನಂತರ ಕಾರವಾರದ ಬಾಲಕಿಯರ ಬಾಲಮಂದಿರದಿಂದ ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ಬಂದಿದ್ದರು. ಸದ್ಯ ತೃತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಸಂಜಯ್‌ ಪ್ರಭು ಅವರು ಎಂ.ಕಾಂ. ಪೂರೈಸಿದ್ದು, ಬೆಂಗಳೂರಿನ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಶೀಲಾ ಅವರು ಮಹಿಳಾ ನಿಲಯದ ಹುಣಸೆ ಹಣ್ಣು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಗರಾಜ್‌ ಬೆಂಗಳೂರಿನಲ್ಲಿ ಮೊಬೈಲ್‌ ಕ್ಯಾಂಟಿನ್‌ ನಡೆಸುತ್ತಿದ್ದಾರೆ. ಮಹಿಳಾ ನಿಲಯದ ನಿವಾಸಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಈ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

‘ಮಹಿಳಾ ನಿಲಯದಲ್ಲಿ ಇದುವರೆಗೆ 25 ನಿವಾಸಿಗಳ ಮದುವೆ ನಡೆದಿದ್ದು, ಇದು 26 ಮತ್ತು 27ನೇ ವಿವಾಹ ಸಮಾರಂಭವಾಗಿದೆ’ ಎಂದು ಎಂದು ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ ತಿಳಿಸಿದರು.

‘ಸರ್ಕಾರದ ವತಿಯಿಂದ ಮಹಿಳಾ ನಿಲಯದ ನಿವಾಸಿಗಳಿಗೆ ಶಿಕ್ಷಣ, ಉದ್ಯೋಗಾವಕಾಶ, ಕೌಶಲಾಭಿವೃದ್ಧಿ ತರಬೇತಿ ಒದಗಿಸಲಾಗುತ್ತದೆ. ಕುಟುಂಬಕ್ಕೆ ಮರು ಸೇರ್ಪಡೆ ಮೂಲಕ ಪುನರ್ವಸತಿಯನ್ನೂ ಕಲ್ಪಿಸಲಾಗುತ್ತಿದೆ. ಸೂಕ್ತ ವರ ಸಿಕ್ಕಿದರೆ ಮಹಿಳೆಯರ ಇಚ್ಛೆಗನುಸಾರವಾಗಿ ಸರ್ಕಾರದ ವತಿಯಿಂದ ವಿವಾಹ ಮಾಡಿಕೊಡಲಾಗುತ್ತದೆ’ ಎಂದೂ ಅವರು ಹೇಳಿದರು.

‘ಮಹಿಳಾ ನಿಲಯದಲ್ಲಿ ಪ್ರಸ್ತುತ 51 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಆಶ್ರಯ ಪಡೆದಿದ್ದಾರೆ. ಅದರಲ್ಲಿ ನಾಲ್ವರು ಕಾಲೇಜು ವಿದ್ಯಾರ್ಥಿನಿಯರೂ ಸೇರಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.