ADVERTISEMENT

ಏಡ್ಸ್ ಕುರಿತು ಜಾಗೃತಿ ವಹಿಸಿ: ಡಾ. ಶಶಿಕಲಾ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 14:12 IST
Last Updated 5 ಡಿಸೆಂಬರ್ 2023, 14:12 IST
ಕಾರ್ಕಳದ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ‘ವಿಶ್ವ ಏಡ್ಸ್ ದಿನದ’ ಅಂಗವಾಗಿ ನಡೆದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಚಾಲನೆ ನೀಡಿದರು
ಕಾರ್ಕಳದ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ‘ವಿಶ್ವ ಏಡ್ಸ್ ದಿನದ’ ಅಂಗವಾಗಿ ನಡೆದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಚಾಲನೆ ನೀಡಿದರು   

ಕಾರ್ಕಳ: ‘ಏಡ್ಸ್ ಕುರಿತು ಯುವಜನಾಂಗ, ಸಾರ್ವಜನಿಕರು ಜಾಗೃತಿ ವಹಿಸಬೇಕಾಗಿದೆ’ ಎಂದು ಕಾರ್ಕಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ ಹೇಳಿದರು.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ನಿವಾರಣಾ ಘಟಕ ಉಡುಪಿ, ಕಾರ್ಕಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಕಾರ್ಕಳ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಸರ್ಕಾರಿ ನರ್ಸಿಂಗ್ ಕಾಲೇಜು ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ‘ವಿಶ್ವ ಏಡ್ಸ್ ದಿನದ’ ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಮುದಾಯಗಳು ಮುನ್ನಡೆಸಲಿ’ ಎನ್ನುವ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಏಡ್ಸ್ ಮಹಾಮಾರಿಗೆ ಅಂತ್ಯ ಹಾಡಲು ಸರ್ವರೂ ಕೈ ಜೋಡಿಸಬೇಕು’ ಎಂದರು.

ADVERTISEMENT

ಜಾಥಾಗೆ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಚಾಲನೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಆರ್ ಡಿ ಸಿಲ್ವ ಕಾರ್ಯಕ್ರಮ ಉದ್ಘಾಟಿಸಿ, ‘ಏಡ್ಸ್ ನಿಯಂತ್ರಣದಲ್ಲಿ ಸಮುದಾಯ ಯುವಜನಾಂಗ, ನರ್ಸಿಂಗ್ ವಿದ್ಯಾರ್ಥಿಗಳು ಮುಖ್ಯ ಪಾತ್ರ ವಹಿಸಬೇಕು. ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿರಬೇಕು’ ಎಂದರು.

ಸಂಪನ್ಮೂಲ ವ್ತಕ್ತಿ ಡಾ.ಅನಂತ್ ಕಾಮತ್, ಏಡ್ಸ್ ಲಕ್ಷಣಗಳು, ಕಾಯಿಲೆ ಹರಡುವ ವಿಧಾನ, ಇದರ ನಿಯಂತ್ರಣದ ಕ್ರಮ, ಮುಂತಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಪ್ರಭಾರ ಡಿ.ಎಚ್.ಇ.ಒ ಶಶಿಧರ ಎಚ್. ಸ್ವಾಗತಿಸಿದರು. ಶಿವಕುಮಾರ ಎಸ್.ಟಿ.ಎಲ್.ಎಸ್. ನಿರೂಪಿಸಿದರು. ಆಪ್ತ ಸಮಾಲೋಚಕ ಕಿರಣ್ ಬಾಬು ವಂದಿಸಿದರು.

ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಸಜನಿ ಸುಬ್ರಹ್ಮಣ್ಯ, ಆಯುಷ್ ವೈದ್ಯಾಧಿಕಾರಿ ಡಾ.ಸುಜಾತಾ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್‌ ಎಚ್., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ್ ಶೆಟ್ಟಿ, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ, ರೋಟರಿ ಪದಾಧಿಕಾರಿಗಳು, ನರ್ಸಿಂಗ್ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿದ್ದರು.

ಜನಜಾಗೃತಿ ಜಾಥಾವು ಸರ್ಕಾರಿ ಆಸ್ಪತ್ರೆಯ ಆವರಣದಿಂದ ಆರಂಭಗೊಂಡು ಪುರಸಭೆ, ಮಾರ್ಕೆಟ್ ರಸ್ತೆ ಮೂಲಕ ಸಾಗಿ ಬಸ್ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಮಾನವ ಸರಪಣಿಯ ರಚನೆಯೊಂದಿಗೆ ಜನಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.