ADVERTISEMENT

ವಿದ್ಯಾಪೋಷಕ್‌ ಯೋಜನೆ: ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ

ದಾನಿ ಶಾರದಾ ಎಂ. ಅವರಿಂದ ಪ್ರತಿಭಾವಂತ ವಿದ್ಯಾರ್ಥಿ ಸ್ವಸ್ತಿಕ್‌ ಕುಟುಂಬಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 2:49 IST
Last Updated 16 ಫೆಬ್ರುವರಿ 2026, 2:49 IST
ಕುಂದಾಪುರ ಸಮೀಪದ ಜಡ್ಕಲ್ ಗ್ರಾಮದ ಸೆಲ್ಕೋಡ್ ನಿವಾಸಿಗಳಾದ ಚಿಕ್ಕಮ್ಮ ಮತ್ತು ಶಂಕರ ನಾಯ್ಕ್ ದಂಪತಿಗಳ ಕುಟುಂಬಕ್ಕೆ ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು
ಕುಂದಾಪುರ ಸಮೀಪದ ಜಡ್ಕಲ್ ಗ್ರಾಮದ ಸೆಲ್ಕೋಡ್ ನಿವಾಸಿಗಳಾದ ಚಿಕ್ಕಮ್ಮ ಮತ್ತು ಶಂಕರ ನಾಯ್ಕ್ ದಂಪತಿಗಳ ಕುಟುಂಬಕ್ಕೆ ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು   

ಕುಂದಾಪುರ: ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ ಯೋಜನೆಯಡಿ ನಿರ್ಮಿಸಿಕೊಟ್ಟ 88ನೇ ಮನೆಯನ್ನು ಶನಿವಾರ ಹಸ್ತಾಂತರಿಸಲಾಯಿತು.

ಎಂಎಸ್‌ಆರ್‌ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಶಾರದಾ ಎಂ. ಅವರು ಪತಿ ಕೃಷ್ಣಮೂರ್ತಿ ಕೆ. ಸ್ಮರಣಾರ್ಥ ₹7 ಲಕ್ಷ ವೆಚ್ಚದಲ್ಲಿ ಬೈಂದೂರು ತಾಲ್ಲೂಕಿನ ಜಡ್ಕಲ್ ಗ್ರಾಮದ ಸೆಲ್ಕೋಡ್ ನಿವಾಸಿಗಳಾದ ಚಿಕ್ಕಮ್ಮ, ಶಂಕರ ನಾಯ್ಕ್ ಪುತ್ರ ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಎಸ್. ನಾಯ್ಕ್‌ ಅವರ ಕುಟುಂಬಕ್ಕೆ ಮನೆ ‘ಛಂದೋಗತಿ’ ನಿರ್ಮಿಸಿಕೊಟ್ಟಿದ್ದಾರೆ.

ಇದು ಶಾರದಾ ಎಂ. ಅವರ ಪ್ರಾಯೋಜಕತ್ವದ ಎರಡನೇ ಮನೆ. ಪ್ರತಿಭಾವಂತ ವಿದ್ಯಾರ್ಥಿ ಸ್ವಸ್ತಿಕ್ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 97 ಅಂಕ ಪಡೆದಿದ್ದು, ವಿದ್ಯಾಪೋಷಕ್ ಅಡಿಯಲ್ಲಿ ಯೋಜನೆಗೆ ಆಯ್ಕೆ ಮಾಡಲಾಗಿತ್ತು.

ADVERTISEMENT

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ದಾನಿ ಶಾರದಾ, ನನ್ನ ಪತಿ ಕೃಷ್ಣಮೂರ್ತಿ ಅವರ ಆಸಕ್ತಿಗಳಲ್ಲಿ ಛಂದಸ್ಸಿನ ಕುರಿತ ಅಧ್ಯಯನವೂ ಒಂದು. ಅವರಿಗೆ ‘ಛಂದೋಗತಿ’ ಎಂಬ ಪುಸ್ತಕ ಬರೆಯಬೇಕೆಂಬ ಕನಸಿತ್ತು, ಈಡೇರಿರಲಿಲ್ಲ. ಹಾಗಾಗಿ ಅವರ ನೆನಪಿಗೆ ನೀಡಿರುವ ಈ ಮನೆಗೆ ಆ ಹೆಸರಿಟ್ಟಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಯಕ್ಷಗಾನ ಕಲಾರಂಗದ ಸಾಮಾಜಿಕ, ಶೈಕ್ಷಣಿಕ, ಕಲಾ ಕಾರ್ಯಕ್ರಮಗಳು ಅನನ್ಯ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿ, ಆಹಾರ, ಔಷಧ, ಶಿಕ್ಷಣ ವಿಕ್ರಯ ಮಾಡಬಾರದು ಎಂದು ನಮ್ಮ ಸಂಸ್ಕೃತಿಯಲ್ಲಿದೆ. ಈ ಮೂರೂ ವಿಧದ ದಾನಗಳು ಈ ಸಂಸ್ಥೆಯಿಂದ ಆಗುತ್ತಿರುವುದು ಅಭಿನಂದನಾರ್ಹ ಎಂದರು.

ವಕೀಲ ರಾಮಚಂದ್ರ ಅಡಿಗ, ಬಿ. ಹರೀಶ್ ತಂತ್ರಿ, ಶಾರದಾ ಅವರ ಸಹೋದರ ಕೃಷ್ಣ ಭಟ್, ಪರಮೇಶ್ವರಿ ಕೃಷ್ಣ ಭಟ್, ಸಹೋದರಿ ಸರೋಜ, ಸುಬ್ರಹ್ಮಣ್ಯ ಭಟ್, ಜೆಸಿಂತಾ, ಮಧುಕರ ಪೂಜಾರಿ, ವಿಠ್ಠಲ ಪೂಜಾರಿ, ವಿಷ್ಣುಮೂರ್ತಿ ಪ್ರಭು, ಸಂಸ್ಥೆಯ ಯು. ವಿಶ್ವನಾಥ ಶೆಣೈ, ಭುವನ ಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಡಾ.ರಾಘವೇಂದ್ರ ರಾವ್, ಪ್ರಾಂಶುಪಾಲ ಅಮರೇಶ್ ಹೆಗಡೆ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.