ADVERTISEMENT

ಶೂನ್ಯ ನೆರಳಿನ ಕೌತುಕ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 12:38 IST
Last Updated 22 ಏಪ್ರಿಲ್ 2021, 12:38 IST
ಶೂನ್ಯ ನೆರಳು
ಶೂನ್ಯ ನೆರಳು   

ಉಡುಪಿ: ಸೂರ್ಯನು ಆಕಾಶದಲ್ಲಿ ಮೇಲೇರುತ್ತಾ ಹೋದಂತೆ ನೆರಳಿನ ಉದ್ದ ಕಡಿಮೆಯಾಗುತ್ತಾ ಹೋಗುತ್ತದೆ. ಶೂನ್ಯ ನೆರಳಿನ ದಿನದಂದು ಸೂರ್ಯ ನೆತ್ತಿಯ ಮೇಲಿನ ನಿಖರ ಬಿಂದು ತಲುಪಿದಾಗ ನೆರಳು ಗೋಚರಿಸುವುದಿಲ್ಲ. ಈ ವಿಸ್ಮಯವನ್ನು ಶೂನ್ಯ ನೆರಳು ಎನ್ನಲಾಗುತ್ತದೆ. ಏ.22ರಿಂದ ಮೇ 1ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಶೂನ್ಯ ನೆರಳಿನ ಕೌತುಕ ವೀಕ್ಷಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ಹಾಗೂ ಆಗಸ್ಟ್‌ನಲ್ಲಿ ಶೂನ್ಯ ನೆರಳು ಗೋಚರಿಸುತ್ತದೆ. ಆಗಸ್ಟ್‌ನಲ್ಲಿ ಮಳೆಯ ಕಾರಣದಿಂದ ವೀಕ್ಷಣೆ ಸಾಧ್ಯತೆ ಕಡಿಮೆ. ಏಪ್ರಿಲ್‌ನಲ್ಲಿ ಬೇಸಗೆ ಇರುವುದರಿಂದ ವೀಕ್ಷಣೆ ಸಾಧ್ಯತೆ ಹೆಚ್ಚಿರುತ್ತದೆ. ಏ.24ರಂದು ಮಧ್ಯಾಹ್ನ 12.18ಕ್ಕೆ ಬೆಂಗಳೂರಿನಲ್ಲಿ, 12.28ಕ್ಕೆ ಮಂಗಳೂರಿನಲ್ಲಿ ಹಾಗೂ 25ರಂದು ಮಧ್ಯಾಹ್ನ 12.29ಕ್ಕೆ ಉಡುಪಿಯಲ್ಲಿ ಶೂನ್ಯ ನೆರಳಿನ ವಿದ್ಯಮಾನ ನೋಡಬಹುದು.

23ರಂದು ಮಂಡ್ಯ, ಪುತ್ತೂರು, 24ರಂದು ಮಂಗಳೂರು, ಹಾಸನ, ಬೆಂಗಳೂರು, 25ರಂದು ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, 26ರಂದು ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರು, 27ರಂದು ಭಟ್ಕಳ, ಶಿವಮೊಗ್ಗ, ಚನ್ನಗಿರಿ, 28ರಂದು ಹೊನ್ನಾವರ, ಕುಮಟಾ, ಶಿಕಾರಿಪುರ, ಚಿತ್ರದುರ್ಗ, 29ರಂದು ಗೋಕರ್ಣ, ಶಿರಸಿ, ರಾಣೆಬೆನ್ನೂರು, ದಾವಣಗೆರೆ, 30ರಂದು ಕಾರವಾರ, ಹಾವೇರಿ, ಮೇ 1ರಂದು ಹುಬ್ಬಳ್ಳಿ , ಹೊಸಪೇಟೆ , ಬಳ್ಳಾರಿ, 2ರಂದು ಧಾರವಾಡ, ಗದಗ, 3ರಂದು ಬೆಳಗಾವಿ, ಸಿಂಧನೂರು, 4ರಂದು ಗೋಕಾಕ್, ಬಾಗಲಕೋಟೆ, ರಾಯಚೂರು, 6ರಂದು ಯಾದಗಿರಿ, 7ರಂದು ವಿಜಯಪುರ, 9ರಂದು ಕಲಬುರಗಿ, 10ರಂದು ಹುಮನಾಬಾದ್‌, 11ರಂದು ಬೀದರ್‌ನಲ್ಲಿ ಶೂನ್ಯ ನೆರಳು ಕಾಣಬಹುದು.

ADVERTISEMENT

ಮೇಲಿನ ಸ್ಥಳಗಳಲ್ಲಿ ಮಧ್ಯಾಹ್ನ 12:15ರಿಂದ 12:35ರ ನಡುವೆ ಶೂನ್ಯ ನೆರಳು ಕಾಣಬಹುದು. ಹೆಚ್ಚಿನ ಮಾಹಿತಿಗೆ https://paac.ppc.ac.in ಸಂಪರ್ಕಿಸಬಹುದು ಎಂದು ಸಂಘದ ಸಂಚಾಲಕ ಅತುಲ್‌ ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.