ADVERTISEMENT

ಗೋಹತ್ಯೆ ನಿಷೇಧ ಮಸೂದೆ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 5:34 IST
Last Updated 12 ಡಿಸೆಂಬರ್ 2020, 5:34 IST

ಬೆಂಗಳೂರು: 'ಸದನದಲ್ಲಿ ಚರ್ಚೆಗೂ ಅವಕಾಶ ಕೊಡದೆ, ತರಾತುರಿಯಲ್ಲಿ ಅಂಗೀಕರಿಸಲಾದ ‘ಗೋಹತ್ಯೆ ನಿಷೇಧ ಮಸೂದೆ'ಯು ಜನರ ಆಹಾರದ ಹಕ್ಕಿನ ಮೇಲೆ ನಡೆಸಿದ ದಾಳಿಯಾಗಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಈ ಅಪ್ರಜಾಸತ್ತಾತ್ಮಕ ಕಾಯ್ದೆಯನ್ನುಸರ್ಕಾರ ಹಿಂಪಡೆಯಬೇಕು' ಎಂದು ‘ಸೌಹಾರ್ದ ಕರ್ನಾಟಕ' ಸಂಘಟನೆ ಆಗ್ರಹಿಸಿದೆ.

'ಗೋವು ಸೇರಿದಂತೆ ಜಾನುವಾರುಗಳ ರಕ್ಷಣೆಗೆ ಈಗಾಗಲೇ ಕಾಯ್ದೆ ಇದ್ದರೂ, ಈ ಹೊಸ ಕಾಯ್ದೆಯ ಅಗತ್ಯ ಏನಿದೆ? ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೆ ಆಹಾರ, ಉಡುಗೆ, ಉದ್ಯೋಗ ಹಕ್ಕುಗಳ ಆಯ್ಕೆಯ ಸ್ವಾತಂತ್ರ್ಯ ನೀಡಿದೆ. ಈ ಮಸೂದೆ ನಾಗರಿಕ ಹಕ್ಕನ್ನು ನಿರ್ಬಂಧಿಸುತ್ತದೆ' ಎಂದು ಆಕ್ಷೇಪ ವ್ಯಕ್ತಪಡಿಸಿದೆ.

'ಅಧಿಕಾರಿಗಳಿಗೆ ಜಾನುವಾರಿಗೆ ಪ್ರಮಾಣಪತ್ರ ನೀಡುವ ಪೂರ್ಣ ಅಧಿಕಾರ ನೀಡಿರುವುದು ಸನ್ನಿವೇಶದ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಲಿದೆ. ಯಾವುದೇ ವ್ಯಕ್ತಿ ಗೋರಕ್ಷಕನ ಹೆಸರಿನಲ್ಲಿ ದಾಳಿ ನಡೆಸಲು ಮುಕ್ತ ಅವಕಾಶ ಕಲ್ಪಿಸುವುದು ಕಾನೂನುಬದ್ಧ ಆಡಳಿತ ಮತ್ತು ಸುವ್ಯವಸ್ಥೆಯನ್ನೇ ಹಾಳು ಮಾಡಬಲ್ಲದು' ಎಂದು ಕಳವಳ ವ್ಯಕ್ತಪಡಿಸಿದೆ.

ADVERTISEMENT

'ಭಜರಂಗದಳ, ಗೋರಕ್ಷಕದಳದಂತಹ ಸಂಘಟನೆಗಳು ರಾಜ್ಯದಲ್ಲಿ ನಡೆಸುತ್ತಾ ಬಂದಿರುವ ಗೂಂಡಾಗಿರಿ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಇದು ಕಾನೂನಾತ್ಮಕ ಸಂರಕ್ಷಣೆ ನೀಡಲಿದ್ದು, ಅತ್ಯಂತ ಅಪಾಯಕಾರಿ ಕ್ರಮ'.

'ಈ ಕಾಯ್ದೆ ಜಾರಿಯಿಂದ ಹಾಲು, ಚರ್ಮ ಹಾಗೂ ಮಾಂಸದ ಉದ್ಯಮಗಳನ್ನು ತೀವ್ರವಾಗಿ ಬಾಧಿಸಲಿದೆ. ಏಕಾಏಕಿಮಸೂದೆಯ ಜಾರಿಗೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಅಪಾಯಕಾರಿ ಕಾಯ್ದೆಯನ್ನು ಕೂಡಲೇ ಸರ್ಕಾರ ವಾಪಸ್ ಪಡೆಯಬೇಕು. ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕಬಾರದು' ಎಂದು ಮನವಿ ಮಾಡಿದೆ.

ಇದಕ್ಕೆ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಸಾಹಿತಿಗಳಾದ ಡಾ.ಮರುಳಸಿದ್ಧಪ್ಪ, ಸುಕನ್ಯಾ, ಆರ್.ಜಿ.ಹಳ್ಳಿ ನಾಗರಾಜ್, ಕೆ.ಶರೀಫಾ, ಎಸ್.ವೈ.ಗುರುಶಾಂತ್, ಕೆ.ಎಸ್.ವಿಮಲಾ, ಗುರುರಾಜ ದೇಸಾಯಿ, ದಲಿತ ಮುಖಂಡ ಗೋಪಾಲಕೃಷ್ಣ ಅರಳಹಳ್ಳಿ, ಕಾರ್ಮಿಕ ಮುಖಂಡ ಕೆ.ಎನ್.ಉಮೇಶ್, ಪ್ರತಾಪಸಿಂಹ ಸಹಮತ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.