ADVERTISEMENT

ಅಧಿಕಾರಿಗಳ ಮನೆ ಕೆಲಸಕ್ಕೆ ಗ್ರಾಮ ಸಹಾಯಕರು

ಜಿಲ್ಲಾಧಿಕಾರಿಗೆ ಅಳಲು ತೋಡಿಕೊಂಡ ನೌಕರರು...

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 10:24 IST
Last Updated 21 ಜೂನ್ 2013, 10:24 IST

ಕಾರವಾರ: ಗ್ರಾಮ ಸಹಾಯಕರ ಕುಂದು ಕೊರತೆಗಳನ್ನು ಪರೀಶೀಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಇಮ್‌ಕೊಂಗ್ಲಾ ಜಮೀರ್ ಅವರಿಗೆ ಮನವಿ ಸಲ್ಲಿಸಿದರು.

ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ಮೇಲಿನ ಅಧಿಕಾರಿಗಳು ಸಹಾಯಕರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ. ನಿಯಮಗಳನ್ನು ಮೀರಿ ಅಧಿಕಾರಿಗಳು ಸಹಾಯಕರನ್ನು ಖಾಸಗಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನೆಯ ಕಸ  ತೆಗೆಯುವುದು, ತರಕಾರಿ, ಕಾಯಿಪಲ್ಲೆ, ಕಿರಾಣಿ ಸಾಮಾನು ತರುವ ಕೆಲಸ ಮಾಡುವುದು ನಿರಾಕರಿಸಿದರೆ ಅಂತವರನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಅಧಿಕಾರಿಗಳು ಬೆದರಿಸುತ್ತಾರೆ. ಅಧಿಕಾರಿಗಳ ಬೆದರಿಕೆಗೆ ಅಂಜಿ ಗ್ರಾಮ ಸಹಾಯಕರು ಅವರು ಹೇಳಿದ ಎಲ್ಲ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಗ್ರಾಮ ಸಹಾಯಕರು ಅಳಲು ತೋಡಿಕೊಂಡಿದ್ದಾರೆ.

ಭಟ್ಕಳ ತಾಲ್ಲೂಕಿನ ಶಿರಾಲಿ ಫಿರ್ಕಾದ ಗ್ರಾಮ ಸಹಾಯಕ ಮಾದೇವ ನಾಯ್ಕ ಎಂಬುವರನ್ನು ಉಪವಿಭಾಗಾಧಿಕಾರಿಗಳು ಮನೆ ಕೆಲಸಕ್ಕೆ ನಿಯೋಜಿಸಿಕೊಂಡಿದ್ದರು. ಅಲ್ಲಿ ಕೆಲಸ ಸರಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ನಾಯ್ಕ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಮನನೊಂದ ನಾಯ್ಕ ಅತ್ಮಹತ್ಯೆಗೆ ಪ್ರಯತ್ನಿಸಿ ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ನಾಯ್ಕ ಅವರ ಬದುಕು ಈಗ ಅತಂತ್ರವಾಗಿದ್ದು ಕೂಡಲೇ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಅವರನ್ನು  ಕೆಲಸದಿಂದ ತೆಗೆದ ಆದೇಶವನ್ನು ಹಿಂಪಡೆಯಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಒಂದು ವಾರದೊಳಗೆ ಆದೇಶ ನೀಡದೇ ಇದ್ದಲ್ಲಿ ಇದೇ 27ರಂದು ಭಟ್ಕಳ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.

ಕಂದಾಯ ಇಲಾಖೆಯಡಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರು ಕರ್ತವ್ಯ ನಿರ್ವಹಿಸುವ ಬಗ್ಗೆ ಸರ್ಕಾದ ಸುತ್ತೋಲೆ ಇದೆ. ಆ ಪ್ರಕಾರವಾಗಿ ಸಹಾಯಕರಿಗೆ ಕೆಲಸ ನೀಡಬೇಕು. ವೈಯಕ್ತಿಕ ಕೆಲಸಗಳಿಗೆ ನೇಮಿಸಿಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಸಂಘದ ಅಧ್ಯಕ್ಷ ವಿಘ್ನೇಶ್ವರ ಭಟ್ಟ, ರಾಮಕೃಷ್ಣ ನಾಯಕ, ಸಂಗೀತ ನಾಯ್ಕ, ಚಂದ್ರಕಾಂತ ನಾಯ್ಕ, ಮಾಸ್ತಯ್ಯ ನಾಯ್ಕ, ಗೋಪಾಲಕೃಷ್ಣ ಜೋಗಿ, ಸಲೀಂ ಎಂ. ಹಳಿಯಾಳ, ಲಕ್ಷ್ಮಣ ವಿ. ದೇವಳ್ಳಿ, ಪರಾಸ್ಕಾ ಸಾವೇರ ಸಾರಿಯಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.