ADVERTISEMENT

ಕಳವೆ ಕಾಡಿನ ಕತೆ ಹೇಳಲಿರುವ ‘ಕಾನ್ಮನೆ’

​ಪ್ರಜಾವಾಣಿ ವಾರ್ತೆ
Published 24 ಮೇ 2014, 10:32 IST
Last Updated 24 ಮೇ 2014, 10:32 IST
ಶಿರಸಿ ತಾಲ್ಲೂಕಿನ ಕಳವೆ ಕಾಡಿನ ನಡುವೆ ತಲೆ ಎತ್ತಿರುವ ‘ಕಾನ್ಮನೆ’ ನಿಸರ್ಗ ಜ್ಞಾನ ಕೇಂದ
ಶಿರಸಿ ತಾಲ್ಲೂಕಿನ ಕಳವೆ ಕಾಡಿನ ನಡುವೆ ತಲೆ ಎತ್ತಿರುವ ‘ಕಾನ್ಮನೆ’ ನಿಸರ್ಗ ಜ್ಞಾನ ಕೇಂದ   

ಶಿರಸಿ: ಕಣಿವೆ ಕೆರೆಗಳಲ್ಲಿ ಓಡುವ ಮಳೆ ನೀರನ್ನು ಹಿಡಿದಿಟ್ಟು ಜಲ ಸಂರಕ್ಷಣೆಯ ಪಾಠ ಮಾಡಿ ರಾಜ್ಯದ ಗಮನ ಸೆಳೆದಿರುವ ಕಳವೆ ಗ್ರಾಮವು ಈಗ ಇನ್ನೊಂದು ಹೆಜ್ಜೆ ಮುಂದಿಟ್ಟು ದೇಸಿ ಅರಣ್ಯ ಜ್ಞಾನ ಹಂಚಿಕೊಳ್ಳುವ ನಿಸರ್ಗ ಜ್ಞಾನ ಕೇಂದ್ರ ‘ಕಾನ್ಮನೆ’ಯನ್ನು ತೆರೆಯಲು ಸಿದ್ಧತೆ ನಡೆಸಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ 7 ಕಿ.ಮೀ ದೂರದ ಕಳವೆಯಲ್ಲಿ 4ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್‌ ಕಟ್ಟಡ ಹಸಿರು ಪರಿಸರದ ನಡುವೆ ತಲೆ ಎತ್ತಿದೆ. ಇಡೀ ಊರವರು ಕಟ್ಟಡ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಜೂ.5ರ ವಿಶ್ವ ಪರಿಸರ ದಿನದಂದು ‘ಕಾನ್ಮನೆ’ಯ ಬಾಗಿಲು ತೆರೆಯುವ ಉತ್ಸಾಹದಲ್ಲಿದ್ದಾರೆ.

ದೇಸಿ ಜ್ಞಾನ ಬಳಸಿ ಯಶಸ್ಸು ಕಂಡ ಕಾಡಿನ ಕತೆಗಳ ಪಾಠ, ಜಲ ಸಂರಕ್ಷಣೆಯ ಜ್ಞಾನ, ಅಡವಿ ಸಸ್ಯಗಳ ಅಡುಗೆ, ಹಳ್ಳಿಗರ ಕೌಶಲ ಹಂಚಿ­ಕೊಳ್ಳುವ ತಾಣವಾಗಿ ಕಾನ್ಮನೆ ಮುಂದಿನ ದಿನಗಳಲ್ಲಿ ಬಳಕೆಯಾಗಿದೆ. ಸಿನಿಮಾ ಥಿಯೇ­ಟರ್‌ ಮಾದರಿಯ ಸಭಾಭವನ, ಚೌಕಾಕಾರದ ಜಗುಲಿ, ಊಟದ ಕೋಣೆ, ಅತಿಥಿಗಳಿಗೆ ಎರಡು ಕೊಠಡಿ ಹೊಂದಿರುವ ಕಾನ್ಮನೆ ಮಲೆನಾಡಿನ ಕಟ್ಟಿಗೆ ಮನೆಯ ಮಾದರಿಯಲ್ಲಿದೆ. ನಾಲ್ಕು ಸುತ್ತಿನಲ್ಲಿ ಹಂಚಿನ ಛಾವಣಿ ಇಳಿಯುವ ನಡುವೆ ಚುಟ್ಟಿ ಅಂಗಳ ಈ ಕಟ್ಟಡದ ವಿಶೇಷವಾಗಿದೆ.

ಸಾಧ್ಯವಾದದ್ದು ಹೇಗೆ?: 2004ರಲ್ಲಿ ಕಳವೆ­ಯಲ್ಲಿ ರಚನೆಯಾದ ಗ್ರಾಮ ಅರಣ್ಯ ಸಮಿತಿ (ವಿಎಫ್‌ಸಿ)ಯ ಗ್ರಾಮಾಭಿವೃದ್ಧಿ ನಿಧಿ ಹಾಗೂ ಹಸಿರು ಸಮೃದ್ಧ ಗ್ರಾಮ ಯೋಜನೆಯ ಫಲಾನುಭವಿಗಳ ವಂತಿಗೆ ಹಣದಲ್ಲಿ ಕಟ್ಟಡ ಮೇಲೆದ್ದಿದೆ. ₨ 35 ಲಕ್ಷ ಅಂದಾಜು ವೆಚ್ಚದ ಕಟ್ಟಡಕ್ಕೆ ಈ ವರೆಗೆ ₨ 20 ಲಕ್ಷ ಖರ್ಚಾಗಿದೆ ಎಂದು ನಿಸರ್ಗ ಜ್ಞಾನ ಕೇಂದ್ರದ ರೂವಾರಿ ಪರಿಸರ ಬರಹಗಾರ ಶಿವಾನಂದ ಕಳವೆ ಶುಕ್ರವಾರ ಭೇಟಿ ನೀಡಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.  

ಬಿರು ಬೇಸಿಗೆಯಲ್ಲೂ ಕಟ್ಟಡ ನಿರ್ಮಾಣಕ್ಕೆ ನೀರಿನ ಕೊರತೆ ಎದುರಾಗಿಲ್ಲ. ಕಣಿವೆಯಲ್ಲಿರುವ ಜಲಪಾತ್ರೆಯಲ್ಲಿ ಇನ್ನೂ ನೀರಿನ ಸಂಗ್ರಹವಿದೆ. ಇದೇ ನೀರನ್ನು ಬಳಸಿ ಇಲ್ಲಿ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ!

‘ಒಂದು ದಶಕದಿಂದ ಜಲ ಸಂರಕ್ಷಣೆಯ ಕಾಯಕದಲ್ಲಿ ತೊಡಗಿರುವ ಕಳವೆ ವಿಎಫ್‌ಸಿ ರಾಜ್ಯದ ಮೊದಲ ಹತ್ತು ಸ್ಥಾನಗಳಲ್ಲಿರುವ ವಿಎಫ್‌ಸಿಗಳಲ್ಲಿ ಒಂದಾಗಿದೆ. ಈ ಹಿಂದೆ ಎರಡು ಕೆರೆಗಳು ಇದ್ದ ಊರಿನಲ್ಲಿ ಈಗ ಒಟ್ಟು 36 ಕೆರೆಗಳಿವೆ. ರಸ್ತೆಯ ನಿರ್ಮಾಣಕ್ಕೆ ಮಣ್ಣು ತೆಗೆದ ಸ್ಥಳಗಳು ಕೆರೆಗಳಾಗಿ ರೂಪುಗೊಂಡಿವೆ. ಗುಡ್ಡ ತಟಾಕದ ಮಾದರಿಯಲ್ಲಿ ಕಣಿವೆ ಕೆರೆಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಇಲ್ಲಿ 1ಕೋಟಿ ಲೀಟರ್‌ ನೀರು ಹಿಡಿದಿಟ್ಟುಕೊಳ್ಳುವ ಗಾತ್ರದ ಕೆರೆಗಳು ಸಹ ಇವೆ. ಮೂರ್ನಾಲ್ಕು ಕೆರೆಗಳು ಮೇ ತಿಂಗಳಿನಲ್ಲಿಯೂ ನೀರನ್ನು ಹಿಡಿದಿಟ್ಟುಕೊಂಡಿವೆ’ ಎಂದರು. 

‘350 ಎಕರೆ ಬೆಟ್ಟ ಪ್ರದೇಶದಲ್ಲಿ ಅಂಟವಾಳ, ಉಪ್ಪಾಗೆ, ಮುರುಗಲು, ಬಿದಿರು ಮೊದಲಾದ 30 ವಿವಿಧ ಜಾತಿಯ ಸ್ಥಾನಿಕ ಸಸಿಗಳನ್ನು ಅರಣ್ಯ ಇಲಾಖೆ ಸಹಕಾರದೊಂದಿಗೆ ವಿಎಫ್‌ಸಿ 2004–05ನೇ ಸಾಲಿನಲ್ಲಿ ನಾಟಿ ಮಾಡಿದ್ದು, ಸಸ್ಯಗಳು ಒಳ್ಳೆಯ ಬೆಳವಣಿಗೆ ಹೊಂದಿವೆ. ಹಲಸು, ಮಾವು ಇನ್ನಿತರ ಸಸಿಗಳು ಸಾವಿರ ಸಂಖ್ಯೆಯಲ್ಲಿವೆ. ಬೆಂಕಿಯಿಂದ ರಕ್ಷಣೆ, ಜಾನುವಾರುಗಳ ನಿಯಂತ್ರಣದಿಂದ ಈ ಕಾರ್ಯದಲ್ಲಿ ಯಶಸ್ಸು ದೊರೆತಿದೆ. ಅರಣ್ಯೀಕರಣ, ಜಲ ಸಂರಕ್ಷಣೆಯ ಮಾದರಿ ವೀಕ್ಷಿಸಲು ಬರುವ ಬೇರೆ ಬೇರೆ ಜಿಲ್ಲೆಯ ಹಳ್ಳಿಗರು, ಅರಣ್ಯ ಇಲಾಖೆ ಅಧಿಕಾರಿಗಳು ಕಳವೆಯ ಬೆಳವಣಿಗೆ ಕಂಡು ಖುಷಿಪಟ್ಟಿದ್ದಾರೆ. ಅವರೊಂದಿಗೆ ಇಲ್ಲಿನ ಹಳ್ಳಿಗರ ಅನುಭವ ಹಂಚಿಕೊಳ್ಳಲು ಮುಂದಿನ ದಿನಗಳಲ್ಲಿ ‘ಕಾನ್ಮನೆ’ ಬಳಕೆಯಾಗಲಿದೆ’ ಎಂದು ಶಿವಾನಂದ ಹೇಳಿದರು.

ಸ್ಥಳೀಯರಾದ ಜಿ.ಜಿ. ದೀಕ್ಷಿತ, ವಿಎಫ್‌ಸಿ ಅಧ್ಯಕ್ಷ ಶ್ರೀಧರ ಭಟ್ಟ, ಚಂದ್ರಶೇಖರ ಹೆಗಡೆ ಹೂಡ್ಲಮನೆ, ಈರಾ ನಾರಾಯಣ ಗೌಡ, ನರಸಿಂಹ ದೀಕ್ಷಿತ, ಧನಂಜಯ, ಮಹೇಶ, ಕೃಷ್ಣಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.