ADVERTISEMENT

ಕಾಮಗಾರಿ ಆದೇಶದಲ್ಲಿ ರಸ್ತೆಯ ಹೆಸರೇ ಬದಲಾವಣೆ!

ಹೊಸ ಆದೇಶ ಹಿಂಪಡೆಯಲು ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 11:18 IST
Last Updated 23 ಮಾರ್ಚ್ 2018, 11:18 IST

ಕಾರವಾರ: ಶಿರವಾಡದ ಸಾಸನವಾಡ ಮುಖ್ಯ ರಸ್ತೆಯಿಂದ ಶ್ರೀರಾಮಾಸತಿ ದೇವಸ್ಥಾನದವರೆಗೆ ನಿರ್ಮಿಸಿಬೇಕಿದ್ದ ರಸ್ತೆಯ ಕಾಮಗಾರಿ ಆದೇಶದಲ್ಲಿ ಪೀರ್ ಮಸ್ಜಿದ್ ರಸ್ತೆ ಎಂದು ತಪ್ಪಾಗಿ ನಮೂದಾಗಿದ್ದು, ಅದನ್ನು ಸರಿಪಡಿಸಿಕೊಡುವಂತೆ ಅಲ್ಲಿನ ಸ್ಥಳೀಯರು ಬುಧವಾರ ಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು.

‘ಸಾಸನವಾಡ ಮುಖ್ಯ ರಸ್ತೆಯಿಂದ ಶ್ರೀರಾಮಾಸತಿ ದೇಗುಲದವರೆಗೆ ಇದ್ದ ಪಂಚಾಯ್ತಿ ಅಧೀನದ ರಸ್ತೆಯನ್ನು ಡಾಂಬರೀಕರಣ ಅಥವಾ ಸಿಮೆಂಟ್ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಿಕೊಡುವಂತೆ ಆಗ್ರಹಿಸಲಾಗಿತ್ತು. ಅದರಂತೆ ಈ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಆದರೆ ಕಾಮಗಾರಿಯ ಆದೇಶದಲ್ಲಿ ‘ಪೀರ್ ಮಸ್ಜಿದ್ ರಸ್ತೆ’ ಎಂದು ತಪ್ಪಾಗಿ ಸಮೂದಾಗಿದೆ’ ಎಂದು ತಿಳಿಸಿದರು.

‘ಈ ಭಾಗದಲ್ಲಿ ಪೀರ್ ಮಸ್ಜಿದ್ ರಸ್ತೆ ಎನ್ನುವುದು ಯಾವುದೂ ಇಲ್ಲ. ಇದನ್ನು ನೋಡಿದರೆ ಮೇಲ್ನೋಟಕ್ಕೆ ಯಾರೊ ಬೇಕಂತಲೆ ಇದನ್ನು ಮಾಡಿರುವ ಅನುಮಾನ ಮೂಡುತ್ತಿದೆ. ಸ್ಥಳೀಯರಲ್ಲಿ ಗಲಭೆ ಎಬ್ಬಿಸಲು ಈ ಕುತಂತ್ರ ನಡೆಸಿರುವಂತೆ ಕಾಣುತ್ತಿದೆ. ಕೂಡಲೇ ಈ ಆದೇಶವನ್ನು ಹಿಂಪಡೆದು, ಸ್ಥಳೀಯರ ಒತ್ತಾಯದಂತೆ ರಸ್ತೆ ಅಭಿವೃದ್ಧಿ ಮಾಡಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಆದೇಶದಲ್ಲಿ ಆಗಿರುವ ತಪ್ಪನ್ನು ತಿದ್ದಿ ಹೊಸ ಆದೇಶ ನೀಡುವುದಾಗಿ ಅಧಿಕಾರಿಗಳು ಅವರಿಗೆ ಭರವಸೆ ನೀಡಿದರು. ಶ್ರೀರಾಮಸತಿ ದೇವಸ್ಥಾನ ಸಮಿತಿಯ ವಿಘ್ನೇಶ್ವರ ನಾಗೇಕರ್, ಶಾಂತಾ ನಾಗೇಕರ್, ರಾಜೇಂದ್ರ ನಾಗೇಕರ್, ಸಂತೋಷ ನಾಗೇಕರ್, ವಿರೋಭಾ ನಾಗೇಕರ್, ಉದ್ದೇಶ ನಾಗೇಕರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.