ADVERTISEMENT

ಕಾಮನ್‌ವೆಲ್ತ್‌ ಹೀರೋಗೆ ಶಿಷ್ಯರ ಮೇಲೆ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 5:21 IST
Last Updated 10 ಡಿಸೆಂಬರ್ 2013, 5:21 IST

ಶಿರಸಿ: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದು ಕೊಟ್ಟ ತಾಲ್ಲೂಕಿನ ಬೆಂಗಳೆ ಮೂಲದ ಕಾಶೀನಾಥ ನಾಯ್ಕ ಈಗ ಜಾವಲಿನ್‌ ತರಬೇತುದಾರ. ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಸದ್ಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದರೂ ಶಿಷ್ಯಂದಿರನ್ನು ಅಂತರರಾಷ್ಟ್ರೀಯ ಮಟ್ಟದ ಆಟಗಾರರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ,

ಪಟಿಯಾಲಾದಲ್ಲಿ ಕೋಚ್ ಆಗಿರುವ ಕಾಶೀನಾಥ ನಾಯ್ಕ ಗರಡಿಯಲ್ಲಿ ಪಳಗಿದ ಉತ್ತರಪ್ರದೇಶದ ರಾಜೇಶಕುಮಾರ್‌ ಬಿಂದ್‌ (19) ವಿಶ್ವ ಜೂನಿಯರ್‌ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಕಾಶೀನಾಥ 78 ಮೀಟರ್‌ ದೂರ ಜಾವೆಲಿನ್‌ ಎಸೆಯುವ ದಾಖಲೆ ಮಾಡಿದ್ದರೆ ಭಾರತೀಯ ಸೇನೆಯಲ್ಲಿ ಹವಾಲ್ದಾರ್‌ ಆಗಿ ಸೇವೆ ಸಲ್ಲಿಸುತ್ತಿರುವ ರಾಜೇಶಕುಮಾರ್‌ 80 ಮೀಟರ್‌ನ ದಾಖಲೆ ಬರೆದಿದ್ದಾರೆ.

‘ಶಿಷ್ಯನ ಸಾಧನೆ ಅತೀವ ಸಂತಸ ಕೊಟ್ಟಿದೆ. ನಮಗಿಂತ ನಮ್ಮ ಶಿಷ್ಯರು ಉತ್ತಮ ಸಾಧನೆ ಮಾಡಿದಾಗ ಅನುಭವಿಸುವ ಖುಷಿ ಶಬ್ದಕ್ಕೆ ನಿಲುಕುವುದಿಲ್ಲ. 2014ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿರುವ ರಾಜೇಶಕುಮಾರ್‌ ಮೇಲೆ ಭಾರತ ಹೆಚ್ಚಿನ ಭರವಸೆ ಇಟ್ಟಿದೆ’ ಎಂದು ಕಾಶೀನಾಥ ಹೇಳಿದರು.

10ಕ್ಕೂ ಹೆಚ್ಚು ಬಾರಿ ಪದಕ ಪಡೆದಿರುವ ರಾಜೇಶಕುಮಾರ್‌ ಜಾವೆಲಿನ್‌ ಥ್ರೋದಲ್ಲಿ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಇದೇ 3ರಿಂದ 7ರ ವರೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಶಿಪ್‌, 2012ರಲ್ಲಿ ನಡೆದ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ರಾಜೇಶ ಚಿನ್ನ ಪಡೆದಿದ್ದಾರೆ.

‘ಪಟಿಯಾಲಾ ಕ್ಯಾಂಪ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 12 ಜನ ತರಬೇತಿ ಪಡೆಯುತ್ತಿದ್ದಾರೆ. ಒರಿಸ್ಸಾದ ಚಿನ್ಮಯ್‌ ರಂಜನ್‌ ಭರವಸೆ ಮೂಡಿಸಿರುವ ಇನ್ನೊಬ್ಬ ಆಟಗಾರ. ಕರ್ನಾಟಕದ ಒಬ್ಬ ಆಟಗಾರನೂ ಇಲ್ಲದಿರುವುದು ಖೇದದ ಸಂಗತಿ. ಪ್ರತಿ ದಿನ ದೈಹಿಕ ತರಬೇತಿಯ ನಂತರ ಆಟಗಾರರನ್ನು ಮಾನಸಿಕವಾಗಿ ಅಣಿಗೊಳಿಸಲು ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಮಾನಸಿಕವಾಗಿ ಆಟಗಾರರು ಸಿದ್ಧವಾದರೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ’ ಎಂದು ಕಾಶೀನಾಥ ತಮ್ಮ ತರಬೇತಿಯ ವಿಧಾನ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.