ADVERTISEMENT

ಕೃಷಿಕರಿಗೆ ಆತ್ಮವಿಶ್ವಾಸ ತುಂಬಿ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 8:00 IST
Last Updated 17 ಡಿಸೆಂಬರ್ 2012, 8:00 IST

ಸಿದ್ದಾಪುರ: `ಕೃಷಿಕರು ಶಹರಗಳಿಗೆ ವಲಸೆ ಹೋಗದಂತೆ ತಡೆಯಬೇಕಾದರೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು'ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೇರೂರು ವಲಯದ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟ, ಕಾನಸೂರಿನ ಕಾಳಿಕಾಭವಾನಿ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ತಾಲ್ಲೂಕಿನ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕೃಷಿ ಮಹೋತ್ಸವ ಮತ್ತು ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ರೈತರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿಯೂ ಕೃಷಿಕರಿಗಾಗಿ ಕಾರ್ಯಕ್ರಮ ನಡೆಯುತ್ತಿದೆ. ಕೃಷಿಕರು ನಮ್ಮ ಜನಜೀವನದ ಜೀವನಾಡಿ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾದರೆ ದೇಶದ ಅಭಿವೃದ್ಧಿಯೂ ಕುಂಠಿತವಾಗುತ್ತದೆ' ಎಂದರು.   

ಕೃಷಿಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಅದರೊಂದಿಗೆ ಸಾರಾಯಿ ಮತ್ತಿತರ ಎಲ್ಲ ರೀತಿಯ ದುಶ್ಚಟಗಳಿಂದ ರೈತರು ದೂರವಿರಬೇಕು. ಬದುಕಿನಲ್ಲಿ ಕಷ್ಟ ಪಡದಿದ್ದರೇ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಕೆ. ಚಂದ್ರಶೇಖರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ರಾಮ ಗೌಡ ಮಾತನಾಡಿದರು. ಕಾಳಿಕಾಭವಾನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ವಿ. ಹೆಗಡೆ ಹೊರಾಲೆ, ಸಾಮಾಜಿಕ ಕಾರ್ಯಕರ್ತ ಆರ್.ಜಿ. ಶೇಟ್, ಕಾಳಿಕಾಭವಾನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ. ಹೆಗಡೆ, ಕಾಳಿಕಾಭವಾನಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಆರ್. ಶೇಷಗಿರಿ ಉಪಸ್ಥಿತರಿದ್ದರು. ಧಾರವಾಡದ ಕೃಷಿ ವಿವಿಯ ಕುಲಪತಿ ಡಾ.ಆರ್.ಆರ್.ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು.

ಶಿರಸಿಯ ರುದ್ರ ದೇವರ ಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅನುರಾಧಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸತೀಶ ಶೆಟ್ಟಿ ಸ್ವಾಗತಿಸಿದರು. ದೀಪಾ ವಂದಿಸಿದರು. ರಾಘವೇಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.