ADVERTISEMENT

ಜಗತ್ತು ಕಲ್ಯಾಣಕ್ಕೆ ದೀಪ ಬೆಳಗಿಸಿದರು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 10:00 IST
Last Updated 23 ಫೆಬ್ರುವರಿ 2011, 10:00 IST

ಕಾರವಾರ: 2012ರಲ್ಲಿ ಸೂರ್ಯನ ಪ್ರಖರ ಶಾಖ ಭೂಮಿಗೆ ಬೀಳಲಿದ್ದು ಇದನ್ನು ತಡೆಗಟ್ಟಲು ಐದು ಎಣ್ಣೆಯಿಂದ ದೀಪಗಳನ್ನು ಹಚ್ಚಬೇಕು ಎಂದು ಟಿವಿ ವಾಹಿನಿಯೊಂದರಲ್ಲಿ ಬರುವ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದ್ದರಿಂದ ಮಂಗಳವಾರ ನಗರದ ಎಲ್ಲ ದೇವಸ್ಥಾನಗಳಲ್ಲಿ ಭಕ್ತರು ಐದು ಎಣ್ಣೆಯಿಂದ ದೀಪ ಬೆಳಗಿ ಜಗತ್ತಿನ ಕಲ್ಯಾಣಕ್ಕೆ ಪ್ರಾರ್ಥಿಸಿದರು. ಬೇವು, ಯಳ್ಳು, ಹಿಪ್ಪೆ, ಶೇಂಗಾ ಹಾಗೂ ತೆಂಗಿನ ಎಣ್ಣೆಯಲ್ಲಿ ಭಕ್ತರು ವಿಶೇಷವಾಗಿ ಮಹಿಳೆಯರು ಜಗತ್ತಿನ ಕಲ್ಯಾಣಕ್ಕಾಗಿ ದೇವಸ್ಥಾನಗಳಲ್ಲಿ ದೀಪ ಹಚ್ಚಿದರು. ನಗರದ ಎಲ್ಲ ದೇವಸ್ಥಾನಗಳಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು.

ಸಂಜೆಯಿಂದಲೇ ಭಕ್ತರು ದೇವಸ್ಥಾನದತ್ತ ದೌಡಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಟಿವಿ ವಾಹಿನಿಯಲ್ಲಿ ಜ್ಯೋತಿಷಿ ಹೇಳಿದ್ದನ್ನು ಕೇಳಿ ಕೆಲವರು ದೇವಸ್ಥಾನಕ್ಕೆ ಬಂದರೆ ಮತ್ತೆ ಕೆಲವರು ಪಕ್ಕದ ಮನೆಯವರು ಹೊಸ ಉಡುಗೆ ಉಟ್ಟು ದೇವಸ್ಥಾನಕ್ಕೆ ಹೋಗಿದ್ದನ್ನು ನೋಡಿ ತಾವೂ ಹೊಸ ಉಡುಗೆ ತೊಟ್ಟು ದೇವಸ್ಥಾನದತ್ತ ಹೆಜ್ಜೆ ಹಾಕಿದ್ದರು.ಜಗತ್ತಿನ ಕಲ್ಯಾಣಕ್ಕೆ ಐದು ಎಣ್ಣೆಯಿಂದ ದೀಪ ಹಚ್ಚುತ್ತಿರುವುದು ದೇವಸ್ಥಾನಕ್ಕೆ ಬಂದ ಕೆಲ ಭಕ್ತರಿಗೆ ಗೊತ್ತಿರಲಿಲ್ಲ. ನಂತರ ವಿಷಯ ತಿಳಿದುಕೊಂಡು ಅವರೂ ಅಂಗಡಿಗಳಿಗೆ ಹೋಗಿ ಎಣ್ಣೆ ತಂದು ದೀಪ ಬೆಳಗಿದರು.

ದೇವಸ್ಥಾನದಲ್ಲಿ ದೀಪ ಹಚ್ಚಿದ ನಂತರ ಭಕ್ತರೆಲ್ಲರೂ ಹೊರಗೆ ಬಂದು ಆಕಾಶದತ್ತ ನೋಡುತ್ತಿದ್ದರು. ಹೀಗೆ ಆಕಾಶ ಏಕೆ ನೋಡುತ್ತಿದ್ದಾರೆ ಎನ್ನುವುದು ಕೆಲವರಿಗೆ ಗೊತ್ತಿರಲಿಲ್ಲ. ಆದರೆ ಆಕಾಶ ನೋಡಿ ಮುಂದೆ ಹೋಗುತ್ತಿದ್ದರು. ಐದು ರೀತಿಯ ಎಣ್ಣೆ ಪಡೆಯಲು ಭಕ್ತರು ಅಂಗಡಿಯಿಂದ ಅಂಗಡಿಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಎಣ್ಣೆ ಪಡೆಯಲು ಕೆಲವು ಅಂಗಡಿಗಳಲ್ಲಿ ಗ್ರಾಹಕರು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗ್ರಾಹಕರು ಎಣ್ಣೆ ಪಡೆಯಲು ಗುಂಪುಗುಂಪಾಗಿ ಬರುವುದು ನೋಡಿ ಅಂಗಡಿಕಾರರಿಗೆ ಶಾಕ್ ಕಾದಿತ್ತು. ಎಣ್ಣೆಯ ಸಂಗ್ರಹ ಕಡಿಮೆ ಇದ್ದಿದ್ದರಿಂದ ಕೆಲವೇ ಗ್ರಾಹಕರಿಗೆ ಮಾತ್ರ ಐದು ಬಗೆಯ ಎಣ್ಣೆ ದೊರೆಯಿತು.

ದಿಢಿ ೀರ್ ಎಂದು ದೇವಸ್ಥಾನಕ್ಕೆ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರಿಂದ ಒಂದು ರೀತಿಯ ಜಾತ್ರೆ ನಿರ್ಮಾನ ಏರ್ಪಟ್ಟಿತು. ನಗರದ ಮಾರುತಿ ಮಂದಿರ, ಕಾಜುಭಾಗ್‌ನಲ್ಲಿರುವ ಮಾರುತಿ ಮಂದಿರ, ಮಹಾದೇವ ದೇವಸ್ಥಾನದ ಎದುರು ಕೆಲಸ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.