ADVERTISEMENT

ಜೆಡಿಎಸ್‌ಗೆ ಕಾಂಗ್ರೆಸ್ ಪ್ರತಿಸ್ಪರ್ಧಿಯಲ್ಲ: ಮಧು

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 9:45 IST
Last Updated 19 ಜುಲೈ 2012, 9:45 IST

ಕಾರವಾರ: `ಕಾಂಗ್ರೆಸ್‌ನಲ್ಲಿ ನಾಯಕರೇ ಇಲ್ಲದಿರುವುದರಿಂದ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್‌ಗೆ ಪ್ರತಿಸ್ಫರ್ಧಿಯಾಗುವುದಿಲ್ಲ~ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿದ್ದ ಹಾಗೂ ಮಾಜಿ ಸಚಿವ ಪ್ರಭಾಕರ ರಾಣೆ ಅವರನ್ನು ಬುಧವಾರ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಕಾಂಗ್ರೆಸ್ ಅಲ್ಪ ಸಂಖ್ಯಾತರನ್ನು ಹೆದರಿಸಿ ಮತ ಪಡೆಯುತ್ತಿತ್ತು. ಕಾಂಗ್ರೆಸ್‌ನ ಓಟ ಬ್ಯಾಂಕ್ ಎಂದೇ ಕರೆಸಿಕೊಳ್ಳುತ್ತಿದ್ದ ಮುಸ್ಲಿಂ ಬಾಂದವರು ಇತ್ತೀಚೆಗೆ ನಡೆದ ಮುಸ್ಲಿಂ ಸಮಾವೇಶದಲ್ಲಿ ಪಕ್ಷಕ್ಕೆ ತೋರಿದ ಬೆಂಬಲದಿಂದ ರಾಜ್ಯದಲ್ಲಿ ಕಾಂಗ್ರೆಸ್ ನಮಗೆ ಪ್ರತಿಸ್ಫರ್ಧಿ ಆಗಲು ಸಾಧ್ಯವಿಲ್ಲ~ ಎಂದರು.

ಆಪರೇಷನ್ ಕಮಲ ಎನ್ನವ ಹೊಸ ಪದ್ದತಿಯಿಂದಾಗಿ ಬಿಜೆಪಿಯಲ್ಲಿ ದಿನಕ್ಕೊಂದು ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ. ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ಜನತೆಯ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ ಹೆಚ್ಚಿನವರು ಜೆಡಿಎಸ್‌ನತ್ತ ಒಲವು ಹೊಂದಿದ್ದಾರೆ~ ಎಂದರು.

`ರಾಜ್ಯದಲ್ಲಿ ರೈತರ, ಬಡವರ, ಮೀನುಗಾರರ ಕಷ್ಟಕ್ಕೆ ಸ್ಪಂದಿಸುವ ಒಳ್ಳೆಯ ನಾಯಕರ ಅಗತ್ಯತೆ ಇದೆ. ಅದಕ್ಕಾಗಿ ಜೆಡಿಎಸ್‌ನ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರನ್ನ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು. ಆಗ ರಾಜ್ಯ ಅಭಿವೃದ್ದಿ ಕಾಣಲಿದೆ~ ಎಂದು ಭವಿಷ್ಯ ನುಡಿದರು.

ಪಕ್ಷ ಅಧಿಕಾರಕ್ಕೆ ಬಂದರೆ ಪಕ್ಷಕ್ಕೆ ಬೆಂಬಲಿಗರೊಂದಿಗೆ ಆಗಮಿಸುವ ಮಾಜಿ ಸಚಿವ ಪ್ರಭಾಕರ ರಾಣೆ ಅವರಿಗೆ ಕುಮಾರ ಸ್ವಾಮಿ ಅವರು ಉನ್ನತ ಹುದ್ದೆ ನೀಡಲಿದ್ದಾರೆ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಓಶಿಮಠ, ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರದೀಪ ನಾಯಕ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರದೀಪ ಶೇಜವಾಡಕರ, ಕ್ಷೇತ್ರಾಧ್ಯಕ್ಷೆ ಮೋಹಿನಿ ನಾಯ್ಕ, ಪಕ್ಷದ ಜಿಲ್ಲಾ ಅಲ್ಪ ಸಂಖ್ಯಾತರ ಸಂಘದ ಅಧ್ಯಕ್ಷ ಮುನಾಫ್ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.