ADVERTISEMENT

ತಕ್ಷಣ ಸೌಲಭ್ಯ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 11:15 IST
Last Updated 13 ಜನವರಿ 2011, 11:15 IST

ಕಾರವಾರ: ಜಿಲ್ಲೆಯ ಎಲ್ಲ ತಾಲ್ಲೂಕಿನ ಅಂಗವಿಕಲರಿಗೆ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳುವುದರೊಂದಿಗೆ ಗುರುತಿನ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಜರುಗಿದ ರಾಷ್ಟ್ರೀಯ ದತ್ತಿ ಕಾಯ್ದೆಯಡಿ ವಿವಿಧ ಅಂಗವಿಕಲರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವಿಕಲರ ಅಭಿವೃದ್ಧಿಗೆ ಸರಕಾರ ನೀಡುತ್ತಿರುವ ಸಹಾಯ ಸೌಲಭ್ಯ ಗಳನ್ನು ಜಿಲ್ಲೆಯ ಎಲ್ಲ ಅಂಗವಿಕಲರಿಗೂ ತಲುಪಿಸಬೇಕು ಎಂದರು.

ಜಿಲ್ಲೆಯಲ್ಲಿ ಒಟ್ಟು 16997 ಅಂಗವಿಕಲರಿದ್ದು 1800 ಬುದ್ಧಿಮಾಂದ್ಯ ಅಥವಾ ಮಾನಸಿಕ ಅಸ್ವಸ್ಥರಿದ್ದಾರೆ. 1,143 ಅಂಧರು, 1968 ಶ್ರವಣದೋಷವುಳ್ಳವರು, 131 ಮಾನಸಿಕ ಅಸ್ವಸ್ಥರು, 9837 ದೈಹಿಕ ಅಂಗವಿಕಲರು ಹಾಗೂ 29 ಕುಷ್ಠರೋಗ ನಿವಾರಕ ಅಂಗವಿಕಲರಿದ್ದಾರೆ.

ಇಲ್ಲಿಯವರೆಗೆ ಒಟ್ಟು 9978 ಅಂಗವಿಕಲರಿಗೆ ಗುರುತಿನ ಚೀಟಿ ನೀಡಲಾಗಿದ್ದು, 1,381 ಜನರಿಗೆ ವಿವಿಧ ಸಾಧನ ಸಲಕರಣೆ ನೀಡಲಾಗಿದ್ದು, 11866 ಜನರಿಗೆ ಮಾಸಾಶನ ನೀಡಿದೆ. 1,216 ಜನರಿಗೆ ವಿದ್ಯಾರ್ಥಿ ವೇತನ ಹಾಗೂ 3,364 ಜನರಿಗೆ ಬಸ್‌ಪಾಸ್ ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಪ್ರತಿ ಗ್ರಾಮ ಪಂಚಾಯಿತಿ ವಿವಿಧ ಯೋಜನೆಗಳಡಿ ಶೇ 5ರಷ್ಟು ಮೀಸಲಾತಿಯನ್ನು ಅಂಗವಿಕಲರಿಗೆ ಮೀಸಲಿಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಜಯ ಮೋಹನರಾಜ್ ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕಿ ಸಿ.ಎನ್. ಹೊಳೆಹೊಸೂರ, ಜಿಲ್ಲಾ ಪಂಚಾಯಿತಿ ಯೋಜನೆ ನಿರ್ದೇಶಕ ಚಂದಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರಾಯಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.