ADVERTISEMENT

ತೋಟಗಾರಿಕಾ ಬೆಳೆಗಳಿಗೆ ರೋಗ: ಸಲಹೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 9:56 IST
Last Updated 13 ಡಿಸೆಂಬರ್ 2012, 9:56 IST

ಶಿರಸಿ: ಅಡಿಕೆ, ಕಾಳುಮೆಣಸು, ಕೊಕ್ಕೋ ಮತ್ತಿತರ ಕೃಷಿ ಬೆಳೆಗಳಿಗೆ ಅಲ್ಲಲ್ಲಿ ರೋಗ ಕಾಣಿಸಿಕೊಂಡಿದ್ದು, ಇಲ್ಲಿನ ತೋಟಗಾರಿಕಾ ಇಲಾಖೆಯ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ರೈತರಿಗೆ ಪರಿಹಾರ ಮಾರ್ಗಗಳನ್ನು ತಿಳಿಸಿದೆ.

ಕೃಷಿ ಸಲಹೆ: ಸುಳಿ ಕೊಳೆ ಮತ್ತು ಅಣಬೆ ರೋಗದಿಂದ ಸತ್ತಿರುವ ಅಡಿಕೆ ಗಿಡಗಳನ್ನು ಮತ್ತು ಸೊರಗು ರೋಗದಿಂದ ಸತ್ತ ಕಾಳುಮೆಣಸಿನ ಬಳ್ಳಿಗಳನ್ನು ಕಿತ್ತು ತೋಟದಿಂದ ಹೊರ ಹಾಕಬೇಕು. ಅಡಿಕೆಯ ಸಸಿಗಳಲ್ಲಿ ಸುಳಿ ತಿಗಣೆ ಬಾಧೆ ನಿಯಂತ್ರಣಕ್ಕೆ ಥೈಮಿಥೋಯೇಟ್ 1.7ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯ ಬುಡಕ್ಕೆ ಸಿಂಪಡಿಸಬೇಕು.

ಎಲೆಗಳಿಗೆ ಮೈಟ್ಸ್ ಕೀಟ ಸಮಸ್ಯೆ ಕಂಡು ಬಂದಲ್ಲಿ ಎಲೆಗಳಿಗೆ ಡಿಕೋಫಾಲ್ 2.5ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಯಾಲಕ್ಕಿಯಲ್ಲಿ ಕಾಂಡಕೊರಕ ಮತ್ತು ಥ್ರಿಪ್ಸ್ ಕೀಟ ನಿಯಂತ್ರಣಕ್ಕೆ ಮೊನೋಕ್ರೊಟೋಫಾಸ್ 1.5 ಮಿಲಿ ಅಥವಾ ಕ್ವಿನಾಲ್‌ಪಾಸ್ 2 ಮಿಲಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಪೂರ್ತಿ ಗಿಡಕ್ಕೆ ಮಧ್ಯಾಹ್ನದ ನಂತರ ಸಿಂಪಡಿಸಬೇಕು.

ಬಾಳೆಯಲ್ಲಿ ಕಟ್ಟೆರೋಗ ಪೀಡಿತ ಗಿಡಗಳನ್ನು ಕಿತ್ತು ತೋಟದಿಂದ ಹೊರ ಹಾಕಬೇಕು. ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 1ಗ್ರಾಂ ಕಾರ್ಬ್‌ಂಡೆಂಜಿಂ ಅಥವಾ 0.5 ಮಿಲಿ ಪ್ರೊಪಿಕಾನಾಝೋಲ್ ಶಿಲೀಂಧ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳಿಗೆ ಸಿಂಪಡಿಸಬೇಕು. ಕಾಳುಮೆಣಸಿನ ಬಳ್ಳಿಯ ಎಲೆಗಳಿಗೆ ಥ್ರಿಪ್ಸ್ ನುಸಿಯ ಪೀಡೆಯಿಂದಾಗಿ ಮುರುಟು ರೋಗ ಕಂಡುಬಂದಿದ್ದು, ನಿಯಂತ್ರಣಕ್ಕೆ ಎಲೆಗಳಿಗೆ ಡೈಮಿಥೋಯೇಟ್ 1.7ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಪ್ರತಿ ಬಳ್ಳಿಗೆ ಸಿಂಪಡಿಸಬೇಕು. ಮಾವಿನಲ್ಲಿ ಹೂ ಹೊರಟ ನಂತರ ಜಿಗಿ ಹುಳ ಮತ್ತು ಬೂದಿ ರೋಗ ನಿಯಂತ್ರಣಕ್ಕೆ ಇಮಿಡಾಕ್ಲೋಪ್ರಿಡ್ 0.25 ಮಿಲಿ ಮತ್ತು ಮ್ಯೋಂಕೋಜೆಬ್ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು. ಗೇರು ಗಿಡಗಳಲ್ಲಿ ಟೀ ಸೊಳ್ಳೆ ಕೀಟದ ನಿಯಂತ್ರಣಕ್ಕೆ ಡೈಮಿಥೋಯೇಟ್ 1.7 ಮಿಲಿ ಅಥವಾ ಕ್ವಿನಾಲಫಾಸ್ 2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣ ಸಿಂಪಡಿಸಬೇಕು. ಈರುಳ್ಳಿ ಬೆಳೆಯಲ್ಲಿ ಕಂಡು ಬರುವ ಸುರುಳಿ ತಿರುಪು ರೋಗ ಬಾಧೆ ನಿಯಂತ್ರಣಕ್ಕೆ ನಾಟಿ ಮಾಡಿದ ನಂತರ ಜಮೀನಿಗೆ ಎಕರೆಯೊಂದಕ್ಕೆ ಒಂದು ಕ್ವಿಂಟಾಲ್‌ನಷ್ಟು ಬೇವಿನ ಹಿಂಡಿ ಮತ್ತು ಎರೆ ಗೊಬ್ಬರ ಹಾಕಿ, ಮೇಲು ಗೊಬ್ಬರವಾಗಿ ಅಮೋನಿಯಂ ನೈಟ್ರೇಟ್ ಮತ್ತು ಸಲ್ಫೇಟ್ ಆಫ್ ಪೊಟ್ಯಾಷ್ ಮಿಶ್ರಣ ನೀಡಿ, ನಂತರ 1.0 ಮಿಲಿ ಹೆಕ್ಸಾಕೊನಾಝೋಲ್ ಅಥವಾ 2ಗ್ರಾಂ ಮ್ಯೋಂಕೋಜೆಬ್ ಶಿಲೀಂಧ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗೆ ತೋಟಗಾರಿಕಾ ಸಲಹಾ ಕೇಂದ್ರ (08384223039, 9449937364) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.