ADVERTISEMENT

ದೃಷ್ಟಿ- ಸೃಷ್ಟಿ ಕವನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 10:00 IST
Last Updated 17 ಅಕ್ಟೋಬರ್ 2011, 10:00 IST

ಶಿರಸಿ: ಮನುಷ್ಯನಲ್ಲಿರುವ ಅತ್ಯಂತ ಹೆಚ್ಚು ಸಂವಹನಕಾರಿ ಅಂಗ ಕಣ್ಣು. ಕಣ್ಣಿನಲ್ಲಿ ಆಗುವಷ್ಟು ಸಂವಹನ ಬೇರೆ ಯಾವ ಅಂಗದಿಂದಲೂ ಸಾಧ್ಯವಿಲ್ಲ. ಹೀಗಾಗಿ ಎಲ್ಲ ಅಂಗಗಳಲ್ಲಿ ನಯನವೇ ಪ್ರಧಾನವಾಗಿದ್ದು, ಮನುಷ್ಯ ತನ್ನ ಸಾವಿನಂತರವೂ ನೇತ್ರದ ಮೂಲಕ ಬದುಕಿರಲು ಅವಕಾಶವಿದೆ. ಹೀಗಾಗಿ ನೇತ್ರದಾನ ಮಾಡಲು ಜನರು ಸಮೂಹ ಜಾಗೃತಿ ಸೃಷ್ಟಿಯಾಗಬೇಕು ಎಂದು ಪ್ರಾಧ್ಯಾಪಕ, ಬರಹಗಾರ ನಿರಂಜನ ವಾನಳ್ಳಿ ಹೇಳಿದರು.

ಅವರು ನಗರದ ಮಹಾಲಕ್ಷ್ಮೀ ಸ್ಮಾರಕ ಆಸ್ಪತ್ರೆಯಲ್ಲಿ ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಆರು ದಿನಗಳ ಕಾಲ ನಡೆದ ವಿವಿಧ ನೇತ್ರ ಸಂಬಂಧಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಭಾನುವಾರ `ದೃಷ್ಠಿ-ಸೃಷ್ಠಿ~ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. `ಕವನ ಮನಸ್ಸಿನ ಶಸ್ತ್ರಚಿಕಿತ್ಸೆ ಮಾಡಿ ಒಳಗಣ್ಣು ತೆರೆಸಿದರೆ ವೈದ್ಯರು ಹೊರಗಣ್ಣಿನ ಸಮಸ್ಯೆ ಪರಿಹರಿಸುತ್ತಾರೆ.
 
ಆದರೆ ಕಣ್ಣಿದ್ದೂ ವಾಸ್ತವದಲ್ಲಿ ಕುರುಡರಂತೆ ಕೆಲಸ ಮಾಡುವವರು ದೊಡ್ಡ ಸಮಸ್ಯೆ ಯಾಗಿದ್ದಾರೆ. ದೂರದೃಷ್ಟಿ ಕೊರತೆಯಿಂದ ವಿಶ್ವ ತೊಳಲಾಗುತ್ತಿದೆ. ನಮ್ಮ ನಾಯಕರು ತಪ್ಪು ಎಂದು ಗೊತ್ತಿದ್ದೂ ಭವಿಷ್ಯವನ್ನು ಗಂಡಾಂತರಕ್ಕೆ ದೂಡುತ್ತಿದ್ದಾರೆ. ಎಲ್ಲ ಸರಿ ಇದ್ದೂ ದೃಷ್ಠಿ ಹೀನತೆ ಹೊಂದಿರುವವರ ದೃಷ್ಟಿ ದೋಷ ನಿವಾರಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ನೇತ್ರ ವಿಭಾಗದ ಹಿರಿಯ ಸಾಮಾಜಿಕ ಸೇವಕ ಎಸ್.ಪಿ. ಮಛಾಡೋ ಅವರನ್ನು ಸನ್ಮಾನಿಸ ಲಾಯಿತು. ಹಿರಿಯ ನೇತ್ರ ತಜ್ಞರಾದ ಡಾ.ಗುರುಪ್ರಸಾದ ಎ.ಎಸ್. ಹುಬ್ಬಳ್ಳಿ, ಡಾ.ಎಂ.ಎಸ್.ರವೀಂದ್ರ ಬೆಂಗಳೂರು ಅವರನ್ನು ಸತ್ಕರಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಘಟಕರಾದ ಡಾ.ಶಿವರಾಮ ಕೆ.ವಿ., ಡಾ.ರಮೇಶ ವೆಂಕಿಮನೆ ಉಪಸ್ಥಿತರಿದ್ದರು. ಎಂ.ಐ.ಹೆಗಡೆ ಸ್ವಾಗತಿಸಿದರು. ಅಶೋಕ ಹಬೀಬ, ರಮಾ ಪಟವರ್ಧನ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.