ADVERTISEMENT

ಪಟ್ಟಾ ನೀಡಲು ಕೇಂದ್ರ ತಿಳಿಸಿದ್ದರೂ ರಾಜ್ಯ ಸರ್ಕಾರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 4:00 IST
Last Updated 7 ಜುಲೈ 2012, 4:00 IST

ಕಾರವಾರ: `ಅರಣ್ಯ ಅತಿಕ್ರಮಣದಾರರಿಗೆ ಕೇಂದ್ರ ಸರ್ಕಾರ ಪಟ್ಟ ನೀಡುವಂತೆ ತಿಳಿಸಿದ್ದರೂ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ~ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ದೂರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪಟ್ಟ ನೀಡಬೇಕು ಎಂದು ಅರ್ಜಿ ಸಲ್ಲಿಸಿದ ರೈತರ ಕಡತಗಳು ದೂಳು ತಿನ್ನುತ್ತಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದಕ್ಕೂ ಮುನ್ನ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು~ ಎಂದರು.

`ಜಿಲ್ಲೆಯ ಅರಣ್ಯದಲ್ಲಿ ಕಟ್ಟಿಗೆ, ಸಾರಾಯಿ ಕಳ್ಳ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕೋಟಿ ಕೋಟಿ ಅರಣ್ಯ ಸಂಪತ್ತು ಲೂಟಿಯಾಗುತ್ತಿದೆ. ಹೊಸದಾಗಿ ಅತಿಕ್ರಮಣ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ~ ಎಂದು ದೇಶಪಾಂಡೆ ದೂರಿದರು.

`ರಾಜ್ಯದಲ್ಲಿ ಮಳೆಯ ಅಭಾವ ಉಂಟಾಗಿದೆ. ರಾಜ್ಯ ಸರ್ಕಾರ ಎಚ್ಚೆತ್ತು ಪರ್ಯಾಯ ಕೃಷಿ ಬೆಳೆ ಉತ್ಪಾದನೆಗೆ ಕಾರ್ಯಕ್ರಮ ರೂಪಿಸಬೇಕು ಎಂದ ಅವರು, ಕಳೆದ ವರ್ಷ ಹಲವು ಕಡೆಗಳಲ್ಲಿ ಬೆಳೆ ಹಾನಿಯಾಗಿತ್ತು. ಇಲ್ಲಿಯವರೆಗೆ ಸರ್ಕಾರ ಅವರಿಗೆ ಪರಿಹಾರ ನೀಡಿಲ್ಲ~ ಎಂದರು.

`ಜಿಲ್ಲೆಯಲ್ಲಿ ಉಸುಕು ಮತ್ತು ಕಲ್ಲಿನ ಸಮಸ್ಯೆಯಿಂದ ಜನಸಾಮಾನ್ಯರು ಮನೆ ನಿರ್ಮಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗೆ ಹರಿಸುವಲ್ಲಿ ಜಿಲ್ಲೆಯ ಮಂತ್ರಿಗಳು ವಿಫಲರಾಗಿದ್ದಾರೆ. ಅಧಿಕಾರಿಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಸಚಿವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸಿಮಿತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಡವರ ಕಷ್ಟ ಕೇಳಲು ಯಾರೂ ಇಲ್ಲದಂತಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಶಿಕ್ಷಣ ಕ್ಷೇತ್ರದಲ್ಲಿ ಅನಾವಶ್ಯಕ ಗೊಂದಲ ನಿರ್ಮಾಣವಾಗಿದೆ. ಡಿಪ್ಲೋಮಾ ಪ್ರವೇಶ ಕೌನ್ಸೆಲಿಂಗ್ ಇನ್ನೂ ಪ್ರಾರಂಭವಾಗಿಲ್ಲ. ನೋಡಲ್ ಸೆಂಟರ್‌ಗಾಗಿ ವಿದ್ಯಾರ್ಥಿಗಳು ಹಣ ಖರ್ಚು ಮಾಡಿ ಹುಬ್ಬಳ್ಳಿಗೆ ಹೋಗುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳ ಹಿತ ಕಾಪಾಡುವ ದೃಷ್ಟಿಯಿಂದ ಕೂಡಲೇ ಜಿಲ್ಲೆಯಲ್ಲಿ ನೋಡಲ್ ಕೇಂದ್ರ ಮಂಜೂರು ಮಾಡಬೇಕು~ ಎಂದರು.

ಕೆಪಿಸಿಸಿ ಸದಸ್ಯ ಸತೀಶ ಸೈಲ್, ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ, ಜಿ.ಪಂ. ಉಪಾಧ್ಯಕ್ಷ ಉದಯ ನಾಯ್ಕ, ಸದಸ್ಯ ಮಧುಕರ ನಾಯ್ಕ, ರಮಾನಂದ ನಾಯಕ, ತಾ.ಪಂ. ಅಧ್ಯಕ್ಷೆ ನಾಗವೇಣಿ ಪಾವುಸ್ಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ ವೈಂಗಣಕರ, ಪ್ರಭಾಕರ ಮಾಳ್ಸೇಕರ, ವಿಠ್ಠಲ ಸಾವಂತ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.