ADVERTISEMENT

`ಬೀದಿ ದೀಪ ಸಮರ್ಪಕವಾಗಿ ನಿರ್ವಹಿಸಿ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 8:01 IST
Last Updated 17 ಡಿಸೆಂಬರ್ 2012, 8:01 IST

ಯಲ್ಲಾಪುರ: ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಬೀದಿ ದೀಪದ ವ್ಯವಸ್ಥೆ ಇತ್ತೀಚೆಗೆ ತೀರಾ ಹದಗೆಟ್ಟಿದ್ದು, ಸಮರ್ಪಕ ನಿರ್ವಹಣೆಯ ಕೊರತೆಯೇ ಈ ಇದಕ್ಕೆ ಕಾರಣ ಎಂದು ಪ.ಪಂ ಸದಸ್ಯರಾದ ಯೋಗೇಶ ಹಿರೇಮಠ ಹಾಗೂ ಶಿರೀಷ್ ಶುಕ್ರವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಟಿ. ಮರಾಠೆ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಚರ್ಚೆಯ ಸಂದರ್ಭದಲ್ಲಿ ಸದಸ್ಯರು ಕಿಡಿ ಕಾರಿದರು.ಆರೋಪಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಎಸ್.ಬಿ. ಪಾಟೀಲ್, ಬೀದಿ ದೀಪವನ್ನು ಸ್ವತಃ ನಿರ್ವಹಿಸಬೇಕೆಂದು ಹಿಂದಿನ ಸಭೆಯಲ್ಲಿ ತಿರ್ಮಾನಿಸಲಾಗಿತ್ತು. ದೀಪಾವಳಿಯಂದು ಎಲ್ಲ ಬೀದಿ ದೀಪ ಹಾಗೂ ಹೈಮಾಸ್ಟ್ ದುರಸ್ತಿ ಮಾಡಿದ್ದು, ವೆಚ್ಚ ಹೆಚ್ಚಲು ಕಾರಣವಾಗಿದೆ ಎಂದು ಸಮರ್ಥಿಸಿಕೊಂಡರು.

ಪಟ್ಟಣದ ಗೋಪಾಲಕೃಷ್ಣ ಗಲ್ಲಿಯಲ್ಲಿ ರೂ 6 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನಲಾದ `ಕೆರೆ' ಯಾರ ಕಣ್ಣಿಗೂ ಕಾಣುವ ಸ್ಥಿತಿಯಲ್ಲಿ ಇಲ್ಲ. ಕಳಪೆ ಕಾಮಗಾರಿಯಿಂದಾಗಿ ಕೆರೆಯ ಅಸ್ತಿತ್ವ ಕಳೆದುಹೋಗಿದೆ. ಕಾಮಗಾರಿಯನ್ನೇ ಮಾಡದೇ ಹಣ ಖರ್ಚು ಮಾಡಲಾಗಿದೆ ಎಂದು ಶಿರೀಷ್ ಪ್ರಭು ಆರೋಪಿಸಿದರು. ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದ ಬಳಿ ರೂ 8.75 ಲಕ್ಷ ಖರ್ಚು ಮಾಡಿ ನಿರ್ಮಾಣ ಮಾಡಿದ `ಉದ್ಯಾನವನ'ದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಹೇಳಿದರು. ಆರೋಪಕ್ಕೆ ಸದಸ್ಯ ರಾಮು ನಾಯ್ಕ ಕೂಡಾ ಧ್ವನಿಗೂಡಿಸಿದರು.

ಪ.ಪಂ. ಕಚೇರಿಯ `ಮೀಟಿಂಗ್ ಹಾಲ್' ನವೀಕರಣ ಕುರಿತಂತೆ ತೀವ್ರ ಚರ್ಚೆ ನಡೆಯಿತು. ಪ.ಪಂ.ಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ನೀಡಿದ ಸಲಹೆಯಂತೆ ನವೀಕರಣ ಕಾರ್ಯ ಕೈಗೊಳ್ಳಲಾಗಿದೆಯೇ ಹೊರತು, ಅನ್ಯ ಉದ್ದೇಶಗಳು ಇದಕ್ಕಿಲ್ಲ ಎಂದು ಅಧ್ಯಕ್ಷ ಪಿ.ಟಿ. ಮರಾಠೆ ಸ್ಪಷ್ಟಪಡಿಸಿದರು. ಇದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಈ ಕಾರ್ಯ ಆರಂಭಿಸುವ ಮುನ್ನ ಸದಸ್ಯರಿಗೆ ಕನಿಷ್ಟ ಮಾಹಿತಿಯನ್ನಾದರೂ ನೀಡಬೇಕಾಗಿತ್ತು.

ಆದ್ದರಿಂದ ಕಾಮಗಾರಿಯ ಬಿಲ್ ಪಾಸ್ ಮಾಡಲೂ ನಾವು ಒಪ್ಪುವುದಿಲ್ಲ ಎಂದು ಸದಸ್ಯರು ಎಚ್ಚರಿಸಿದರು. `ನವೀಕರಣಕ್ಕೆ ಸಲಹೆ ನೀಡಿದ ಜಿಲ್ಲಾಧಿಕಾರಿ ಈ ಕಾಮಗಾರಿಗೆ ಟೆಂಡರ್ ಬೇಡವೆಂದು ಹೇಳಿದ್ರಾ ಎಂದು ಪ್ರಶ್ನಿಸಿದರು. ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಮುಖ್ಯಾಧಿಕಾರಿ ಪಾಟೀಲ, ಸದಸ್ಯರ ಆಶಯದಂತೆ ಟೆಂಡರ್ ಕರೆದೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಎಸ್‌ಜಿಎಸ್‌ಆರ್‌ವೈ ಯೋಜನೆಯನ್ನು ಪ.ಪಂ. ವ್ಯಾಪ್ತಿಯಲ್ಲಿ ಹೇಗೆ ಅನುಷ್ಠಾನ ಮಾಡುವಿರಿ, ಇದಕ್ಕೆಲ್ಲಾ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುತ್ತಿದೆಯೇ, ಎಂಬ ರಾಮು ನಾಯ್ಕರ ಪ್ರಶ್ನೆಗೆ ಸಮಂಜಸ ಉತ್ತರ ದೊರೆಯಲಿಲ್ಲ. ಮುಖ್ಯಾಧಿಕಾರಿ ಪಾಟೀಲ, ಯಾವುದೇ ಕಾರ್ಯಯೋಜನೆ ಕೈಗೊಳ್ಳುವಾಗಲೂ ಸರ್ಕಾರ ನಿರ್ದಿಷ್ಟಪಡಿಸಿದ ನಿಯಮಾವಳಿ, ಮಾರ್ಗಸೂಚಿಗಳನ್ನು ಅನುಸರಿಸದಿರಲು ಸಾಧ್ಯವೇ ಇಲ್ಲವೆಂದು ಸಮಜಾಯಿಷಿ ನೀಡಿದರು.

`ಪ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಲ ಕಾಮಗಾರಿಗಳಿಗೆ ಠರಾವೇ ಆಗಿರುವುದಿಲ್ಲ' ಎಂಬ ಶಿರೀಷ್ ಪ್ರಭು ಆರೋಪಕ್ಕೆ `ಅಧಿಕಾರಿಗಳು ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ಬರೆದಿದ್ದೇ ಸಿದ್ಧಾಂತವಾಗುತ್ತಿದೆ' ಎಂದು ರಾಮು ನಾಯ್ಕ ದೂರಿದರು.

ಪ್ರತಿಭಾ ಕಾರಂಜಿ ಉದ್ಘಾಟನೆ ಇಂದು
ಶಿರಸಿ:
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಇದೇ 17ರ ಬೆಳಿಗ್ಗೆ 9 ಗಂಟೆಗೆ ತಾಲ್ಲೂಕಿನ ಭೈರುಂಬೆಯ ಶಾರದಂಬಾ ಪ್ರೌಢಶಾಲೆಯಲ್ಲಿ ನಡೆಯಲಿದ್ದು, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. ವಿದ್ಯಾರ್ಥಿಗಳಿಗಾಗಿ ಜಾನಪದ ನೃತ್ಯ, ನಾಟಕ, ಕೋಲಾಟ, ಕವ್ವಾಲಿ, ಭರತನಾಟ್ಯ ಸೇರಿದಂತೆ ವಿವಿಧ 25ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT