ADVERTISEMENT

ಮಕ್ಕಳಿಗೆ ಮನೆಯಲ್ಲೇ ಪಾಠ ನೀಡಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:40 IST
Last Updated 21 ಸೆಪ್ಟೆಂಬರ್ 2011, 6:40 IST

ಸಿದ್ದಾಪುರ: ಜೀವನ ಶಿಕ್ಷಣ ಮತ್ತು ನೀತಿಪಾಠದ ಕಲಿಕೆಯನ್ನು ಮಕ್ಕಳಿಗೆ ಮನೆಯಲ್ಲಿಯೇ ನೀಡಬೇಕು  ಎಂದು `ಹೋರಾ~ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಸುಹಾಸ್ ಹೆಗಡೆ ಅಭಿಪ್ರಾಯಪಟ್ಟರು.

`ಹೋರಾ~ ಸಂಸ್ಥೆಯ ಆಶ್ರಯದಲ್ಲಿ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು `ಬಿಸ್ವಾ~ ಪ್ರತಿಷ್ಠಾನದ ಸಹಕಾರದೊಂದಿಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ(ಅರ್ಬನ್ ಬ್ಯಾಂಕ್ ಸಭಾಂಗಣ) ಮಂಗಳವಾರ ಏರ್ಪಡಿಸಿದ್ದ `ವಿದ್ಯಾರ್ಥಿ ಜಾಗೃತಿ ವಿಚಾರ ಸಂಕಿರಣ~ದಲ್ಲಿ ಅವರು ಮಾತನಾಡಿದರು.

`ನಮ್ಮ ಜಿಲ್ಲೆಯಲ್ಲಿರುವ ಪರಿಸರ ವೈವಿಧ್ಯ ಇನ್ನೆಲ್ಲಿಯೂ ಕಾಣದು. ಕರಾವಳಿ, ಮಲೆನಾಡು, ಬಯಲುಸೀಮೆ ಮೂರನ್ನೂ ಹೊಂದಿರುವ ಜಿಲ್ಲೆ ನಮ್ಮದು. ಉ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಲಾಭದಾಯಕ ಉದ್ದಿಮೆಯಾಗುತ್ತಿದೆ. ಪ್ರವಾಸೋದ್ಯಮದ ಮೂಲಕ ಜಿಲ್ಲೆಯ ಸಂಸ್ಕೃತಿಯನ್ನು ಪರಿಚಯಿಸಲು ಸಾಧ್ಯವಿದೆ.

ಜಿಲ್ಲೆಯ ಪ್ರವಾಸಿ ತಾಣಗಳು, ಜನಜೀವನ, ಸಂಸ್ಕೃತಿಯ ಬಗ್ಗೆ ಪ್ರವಾಸಿಗರಿಗೆ ತಿಳಿಸಿ ಹೇಳುವ ಮಾರ್ಗದರ್ಶಕರ ಕೊರತೆ ನಮ್ಮಲ್ಲಿದೆ~ ಎಂದರು.

`ಜಿಲ್ಲೆಯ ಪ್ರವಾಸಿ ತಾಣಗಳ ಮಹತ್ವ~ ಕುರಿತಂತೆ ಮಾತನಾಡಿದ ಲೇಖಕ ಶಿವಾನಂದ ಕಳವೆ, `ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡುವ ಮೊದಲು ಅವುಗಳ ಐತಿಹಾಸಿಕ ಮಹತ್ವವನ್ನು ಅರಿತುಕೊಳ್ಳಬೇಕು. ನಾವಿರುವ ಸ್ಥಳದ ಮಹತ್ವವನ್ನು ತಿಳಿದುಕೊಳ್ಳದಿದ್ದರೇ ನಾವು ಅವುಗಳನ್ನು ಕಳೆದುಕೊಳ್ಳಬೇಕಾಗುತ್ತದೆ~ ಎಂದರು.

ಮುಖ್ಯ ಅತಿಥಿಗಳಾಗಿ ಪಟ್ಟಣದ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, `ಬಿಸ್ವಾ~ ಪ್ರತಿಷ್ಠಾನದ ಅಧ್ಯಕ್ಷ ಗುರುರಾಜ ಶಾನಭಾಗ, ಲೇಖಕ ಶಿವಾನಂದ ಕಳವೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಗೋಪಾಲಕೃಷ್ಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಜು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.