ADVERTISEMENT

ಶರಾವತಿಯಲ್ಲಿ ಮುಂದುವರಿದ ಪ್ರವಾಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 8:41 IST
Last Updated 4 ಆಗಸ್ಟ್ 2013, 8:41 IST

ಕಾರವಾರ: ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆ ಶನಿವಾರ ಕ್ಷೀಣಿಸಿದೆ. ಆದರೆ, ಶರಾವತಿ ಹಾಗೂ ಅಘನಾಶಿನಿ ನದಿಯಲ್ಲಿ ಪ್ರವಾಹ ಮುಂದುವರಿದಿದೆ.

ಕರಾವಳಿಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಕೆಲ ಸಮಯ ತುಂತುರು ಮಳೆಯಾಗಿದ್ದು, ಬಿಸಿಲು ಚುರುಗುಟ್ಟುತ್ತಿತ್ತು. ಅರೆಬಯಲುಸೀಮೆ ಪ್ರದೇಶಗಳಾದ ಹಳಿಯಾಳ, ದಾಂಡೇಲಿ, ಮುಂಡಗೋಡ ಹಾಗೂ ಮಲೆನಾಡಿನ ಯಲ್ಲಾಪುರ, ಶಿರಸಿ ಹಾಗೂ ಸಿದ್ಧಾಪುರದಲ್ಲಿ ಮಳೆ ಕ್ಷೀಣಿಸಿತ್ತು.

ನೀರು ಹೊರಕ್ಕೆ: ಕದ್ರಾ ಹಾಗೂ ಕೊಡಸಳ್ಳಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ನೀರು ಹೆಚ್ಚಿನ ಮಟ್ಟದಲ್ಲಿ ಜಲಾಶಯ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕದ್ರಾ ಜಲಾಶಯದ ಮೂರು ಕ್ರೆಸ್ಟ್‌ಗೇಟ್‌ಗಳಿಂದ 12 ಸಾವಿರ ಕ್ಯೂಸೆಕ್ ನೀರು ಹಾಗೂ ಕೊಡಸಳ್ಳಿ ಎರಡು ಕ್ರೆಸ್ಟ್‌ಗೇಟ್‌ಗಳ ಮೂಲಕ 4 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಮೀನುಗಾರಿಕೆಗೆ ಮತ್ತೆ ಹಿನ್ನಡೆ: ಕಳೆದ ಎರಡು ದಿನಗಳಿಂದ ಮಳೆ ಗಾಳಿ ಹೆಚ್ಚಿದ್ದರಿಂದ ಮೀನುಗಾರಿಕೆಗೆ ಹಿನ್ನಡೆಯಾಗಿತ್ತು. ಶನಿವಾರ ಕೂಡ ಬೆಳಿಗ್ಗೆ ತೆರಳಿದ್ದ  ಯಾಂತ್ರಿಕ ದೋಣಿಗಳ ಪೈಕಿ ಕೆಲವು ದೋಣಿ ಮೀನುಗಾರಿಕೆ ಸಾಧ್ಯವಾಗದೇ ಮಧ್ಯಾಹ್ನವೇ ವಾಪಸಾಗಿವೆ. ಕೆಲ ದೋಣಿಗಳಿಗೆ ಮಾತ್ರ ಸುಮಾರು 50-60 ಕೆ.ಜಿ ಸಿಗಡಿ ದೊರೆತಿವೆ.

ನಾಲ್ಕು ಕಡೆ ಗಂಜಿಕೇಂದ್ರ
ಹೊನ್ನಾವರ: ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಶರಾವತಿ ನದಿಗೆ ಬಿಡುತ್ತಿರುವ ಕಾರಣ ಜಲಾಶಯದ ಕೆಳಭಾಗದ ನದಿ ದಂಡೆಗಳ ಪ್ರದೇಶಗಳಲ್ಲಿ ಶನಿವಾರವೂ ಪ್ರವಾಹದ ಭೀತಿ ಮುಂದುವರಿದಿದೆ.

ಜಲಾಶಯದ ನೀರಿನ ಮಟ್ಟ ಶನಿವಾರ 1816.75 ತಲುಪಿದ್ದು ಭರ್ತಿಯಾಗಲು ಇನ್ನು ಇನ್ನು 1.25 ಅಡಿ ಮಾತ್ರ ಬಾಕಿ ಇದೆ. ಜಲಾಶಯದ ಮೇಲ್ಭಾಗದ ಪ್ರದೇಶಗಳಲ್ಲಿ ಶನಿವಾರ ಸಂಜೆ ಜೋರಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಆತಂಕ ಇನ್ನಷ್ಟು ಹೆಚ್ಚಿದೆ.
ಶನಿವಾರ ಲಿಂಗನಮಕ್ಕಿ ಜಲಾಶಯದಿಂದ 52,668 ಕ್ಯೂಸೆಕ್ ನೀರು ಹೊರಬಿಡಲಾಗಿದ್ದು ಈ ಜಲಾಶಯದ ಕೆಳಭಾಗದಲ್ಲಿರುವ ಶರಾವತಿ ಟೇಲರೇಸ್‌ನಿಂದ ಶರಾವತಿ ನದಿಗೆ 47 ಸಾವಿರ ಕ್ಯೂಸೆಕ್ ನೀರನ್ನು ಮಾತ್ರ ನದಿಗೆ ಬಿಡಲಾಗಿದೆಯೆಂದು ಮೂಲಗಳು ತಿಳಿಸಿವೆ.

ಹೈಗುಂದದ ಕಿರಿಯ ಪ್ರಾಥಮಿಕ ಶಾಲೆ, ಅಳ್ಳಂಕಿಯ ಸರಕಾರಿ ಪ್ರೌಢಶಾಲೆ, ಮೋಟೆ ಹಾಗೂ ಮೋಳಕೋಡನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಿರಾಶ್ರಿತರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆಯೆಂದು ತಹಶೀಲ್ದಾರ್ ಕಚೇರಿಯ ಪ್ರಕಟಣೆ ತಿಳಿಸಿದೆ.
ತಹಶೀಲ್ದಾರ್ ಎಸ್.ಎಸ್.ಪೂಜಾರಿ, ಕಂದಾಯ ಅಧಿಕಾರಿ ಜಗದೀಶ ಪೂಜಾರಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು.

ವರದಾ ನದಿಯಲ್ಲಿ ಪ್ರವಾಹ
ಶಿರಸಿ: ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಆಗಾಗ ದೊಡ್ಡ ಮಳೆ ಸುರಿಯುತ್ತಿದೆ. ನಾಲ್ಕಾರು ದಿನಗಳಿಂದ ಮಳೆಯ ಜೊತೆಗೆ ಜೋರಾದ ಗಾಳಿ ಬೀಸುತ್ತಿದೆ. ಈಗಾಗಲೇ ಅಡಿಕೆ ಬಂದಿರುವ ಉದುರು ರೋಗದ ಜೊತೆಗೆ ಗಾಳಿಯಿಂದ ಇನ್ನಷ್ಟು ಅಡಿಕೆ ಉದುತ್ತಿರುವುದರಿಂದ ಬೆಳೆಗಾರರು ಚಿಂತಿತರಾಗಿದ್ದಾರೆ.

ತಾಲ್ಲೂಕಿನ ಬನವಾಸಿ ಭಾಗದಲ್ಲಿ ವರದಾ ನದಿಗೆ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಬನವಾಸಿ-ಮೊಗಳ್ಳಿ ನಡುವಿನ ರಸ್ತೆಯ ಮೇಲೆ ಮೂರು ಅಡಿ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಮೊಗಳ್ಳಿ ಭಾಗದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಹೊತ್ತಿಗೆ ವರದಾ ನದಿಗೆ ಮತ್ತೆ ಪ್ರವಾಹ ಬಂದಿದೆ. ಸಾಗರ, ಸೊರಬ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ವರದಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಈ ಹಿಂದೆ ಪ್ರವಾಹ ಬಂದಾಗ ಮುಳುಗಿದ್ದ ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆಯ ಮೇಲಿನ ನೀರಿನ ಪ್ರಮಾಣ ಕಡಿಮೆಯಾಗಿ ಸೇತುವೆಯ ಅರ್ಧಭಾಗ ಕಾಣುವ ವೇಳೆ ಮತ್ತೆ ವರದೆಗೆ ನೆರೆ ಬಂದಿದ್ದರಿಂದ ಪುನಃ ಸೇತುವೆ ಮುಳುಗಿದೆ. ಸಹಸ್ರಾರು ಎಕರೆ ಕೃಷಿಭೂಮಿ ಸುಮಾರು 15 ದಿನಗಳಿಂದ ನೀರಿನಲ್ಲಿ ಸಂಪೂರ್ಣ ಮುಳುಗಿದ್ದು, ಭತ್ತ ಬಿತ್ತನೆ ಮಾಡಿರುವ ರೈತರು ಸಸಿ ಕೊಳೆತು ಹೋಗುವುದೆಂಬ ಆತಂಕದಲ್ಲಿದ್ದಾರೆ. ಗದ್ದೆ ನೀರಿನಲ್ಲಿ ಮುಳುಗಿರುವುದರಿಂದ ಕೆಲವರು ಭತ್ತ ನಾಟಿ ಮಾಡಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿದ್ದಾರೆ. 

ಮರ ಬಿದ್ದು ತೋಟಕ್ಕೆ ಹಾನಿ
ಯಲ್ಲಾಪುರ: ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಚಂದಗುಳಿ ಗ್ರಾಮದ ಉದ್ದಾಬೈಲ್ ಪುಟ್ಟ ರಾಮಕೃಷ್ಣ ಭಟ್ ಅವರ ತೋಟದಲ್ಲಿ ಭಾರಿ ಗಾತ್ರದ ಮತ್ತಿ ಮರವೊಂದು ಬಿದ್ದ ಅಡಿಕೆ ಮರಗಳಿಗೆ ವ್ಯಾಪಕ ಹಾನಿಯಾಗಿದೆ.

ಇದರಿಂದ ಧರೆ ಕುಸಿದು ಹಳ್ಳದ ನೀರು ತೋಟಕ್ಕೆ ನುಗ್ಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
|
ಜಿಲ್ಲೆಯಲ್ಲಿ 37.9 ಮಿ.ಮೀ. ಮಳೆ
ಆ.3 ರಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 37.9 ಮಿ.ಮೀ ಮಳೆಯಾಗಿದೆ. ಅಂಕೋಲಾ 18.8ಮಿ.ಮೀ, ಭಟ್ಕಳ 42 ಮಿ.ಮೀ, ಹಳಿಯಾಳ 10.6ಮಿ.ಮೀ, ಹೊನ್ನಾವರ 15.6 ಮಿ.ಮೀ, ಕಾರವಾರ 29.6 ಮಿ.ಮೀ, ಕುಮಟಾ 40.7ಮಿ.ಮೀ, ಮುಂಡಗೋಡ 16.2ಮಿ.ಮೀ, ಸಿದ್ದಾಪುರ 98.8ಮಿ.ಮೀ, ಶಿರಸಿ 22 ಮಿ.ಮೀ, ಜೋಯಡಾ 32.2 ಮಿ.ಮೀ, ಯಲ್ಲಾಪುರ 90.8 ಮಿ.ಮೀ ಮಳೆಯಾಗಿದೆ. ಆ.1 ರಿಂದ ಇಂದಿನವರೆಗೆ 143.9ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.