ADVERTISEMENT

ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 7:15 IST
Last Updated 28 ಅಕ್ಟೋಬರ್ 2017, 7:15 IST
ಶಿರಸಿಯಲ್ಲಿ ಪಿ.ಎಸ್‌.ಬಿ–68 ಭತ್ತದ ತಳಿಯನ್ನು ಪರಿಚಯಿಸಲಾಯಿತು. ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಬಿ.ಎಸ್.ಜನಗೌಡ, ಲಕ್ಷ್ಮೀನಾರಾಯಣ ಹೆಗಡೆ ಇದ್ದಾರೆ.
ಶಿರಸಿಯಲ್ಲಿ ಪಿ.ಎಸ್‌.ಬಿ–68 ಭತ್ತದ ತಳಿಯನ್ನು ಪರಿಚಯಿಸಲಾಯಿತು. ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಬಿ.ಎಸ್.ಜನಗೌಡ, ಲಕ್ಷ್ಮೀನಾರಾಯಣ ಹೆಗಡೆ ಇದ್ದಾರೆ.   

ಶಿರಸಿ: ಮಳೆಯಾಶ್ರಿತ ತಗ್ಗು ಪ್ರದೇಶಕ್ಕೆ ಶಿಫಾರಸು ಮಾಡಿರುವ ಪಿ.ಎಸ್.ಬಿ– 68 ಭತ್ತದ ತಳಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ಮುಂಗಾರಿನಲ್ಲಿ ಭತ್ತದ ಸಮಗ್ರ ಬೆಳೆ ನಿರ್ವಹಣೆ’ ಕುರಿತ ಪ್ರಾತ್ಯಕ್ಷಿಕೆ ನಡೆಯಿತು.

ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಬಿ.ಎಸ್.ಜನಗೌಡ ಮಾತನಾಡಿ, ‘ಇದು ದೀರ್ಘಾವಧಿ ತಳಿಯಾಗಿದ್ದು (140– 145 ದಿನಗಳು), ಅಧಿಕ ಇಳುವರಿ ಸಾಮರ್ಥ್ಯ (ಸರಾಸರಿ ಇಳುವರಿ 50-55 ಕ್ವಿ/ಹೆ) ಹೊಂದಿದೆ. ಅವಲಕ್ಕಿ ಹಾಗೂ ಮಂಡಕ್ಕಿಗೆ ಸೂಕ್ತವಾದ ತಳಿ ಇದಾಗಿದ್ದು, ಬೆಂಕಿ ರೋಗ ನಿರೋಧಕ ಹೊಂದಿದೆ. ಸೂಕ್ತ ತಂತ್ರಜ್ಞಾನ ಅಳವಡಿಸಿದರೆ ಭತ್ತದ ಪೈರು ಸಮೃದ್ಧವಾಗಿ ಬೆಳೆಯಲಿದೆ. ಹೀಗಾಗಿ ಈ ಕುರಿತು ಎಲ್ಲ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ, ಕೃಷಿಯಲ್ಲಿನ ವಿಫುಲ ಅವಕಾಶಗಳ ಕುರಿತು ಮಾಹಿತಿ ನೀಡಿದರು. ತೋಟಗಾರಿಕಾ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಲಕ್ಷ್ಮೀನಾರಾಯಣ ಹೆಗಡೆ ಮಾತನಾಡಿ, ‘ಆಧುನಿಕ ತಂತ್ರಜ್ಞಾನ ಬಳಕೆಯಿಂದ ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸಬಹುದಾಗಿದೆ. ಆಗ ಯುವಕರು ಕೃಷಿಯಲ್ಲಿ ಹೆಚ್ಚು ಒಲವು ತೋರಲು ಸಾಧ್ಯ’ ಎಂದರು.

ADVERTISEMENT

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಭಟ್ಟ, ಕೃಷಿ ಅರಣ್ಯ ಪದ್ಧತಿ ಮತ್ತು ಅರಣ್ಯ ಇಲಾಖೆಯಲ್ಲಿರುವ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು. ಕೃಷಿಯಲ್ಲಿನ ಅನುಭವ ಹಂಚಿಕೊಂಡ ರೈತ ರಮೇಶ ಹೆಗಡೆ, ‘ಪಿ.ಎಸ್.ಬಿ– 68 ಭತ್ತದ ತಳಿಯನ್ನು ಇದೇ ಮೊದಲ ಬಾರಿಗೆ ಕೃಷಿ ವಿಜ್ಞಾನ ಕೇಂದ್ರದವರು ತಾಲ್ಲೂಕಿನಲ್ಲಿ ಪ್ರಾತ್ಯಕ್ಷಿಕೆಯಾಗಿ ಪರಿಚಯಿಸಿದ್ದಾರೆ. ಸಮಗ್ರ ಬೆಳೆ ನಿರ್ವಹಣೆಯ ಕುರಿತ ಮಾಹಿತಿ ಕೂಡ ನೀಡಿದ್ದರಿಂದ ಉತ್ತಮ ಬೆಳೆ ಬಂದಿದೆ. ತೆನೆ ಹಾಗೂ ಕಾಳು ಕಟ್ಟಿದ್ದನ್ನು ನೋಡಿದ್ದಲ್ಲಿ, ಈ ತಳಿ ಸ್ಥಳೀಯ ತಳಿಗಳಿಗಿಂತ ಉತ್ತಮ ಇಳುವರಿ ನೀಡಬಹುದು’ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಂಜು ಎಂ.ಜೆ. ಮಾತನಾಡಿ, ‘ಸಾವಯವ ಕೃಷಿ ಜತೆಗೆ ಶಿಫಾರಿತ ರಾಸಾಯನಿಕಗಳ ಬಳಕೆಯಿಂದ ಉತ್ತಮ ಇಳುವರಿ ಪಡೆಯಬಹುದು. ಇಸ್ರೇಲ್ ಮಾದರಿಯ ನೀರಿನ ಸದ್ಬಳಕೆ, ವಿವಿಧ ತಂತ್ರಜ್ಞಾನಗಳ ಬಳಕೆ ಹಾಗೂ ಕೃಷಿಯಲ್ಲಿ ಅರಣ್ಯದ ಪ್ರಾಮುಖ್ಯವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.