ADVERTISEMENT

ಸೋರುವ ಬಸ್: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 10:35 IST
Last Updated 17 ಜೂನ್ 2011, 10:35 IST

ಕಾರವಾರ: ಬಸ್ಸಿನ ಅವ್ಯವಸ್ಥೆ ಖಂಡಿಸಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ತಾಲ್ಲೂಕಿನ ಹಳಗಾ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ಬಸ್ ನಿಲ್ದಾಣದಿಂದ ಉಳಗಾಕ್ಕೆ ಹೋಗುವ ಬಸ್ ಸಂಪೂರ್ಣವಾಗಿ ಸೋರುತ್ತಿತ್ತು. ಇವತ್ತು ಪರೀಕ್ಷೆ ಇದ್ದ ಕಾರಣ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಅನಿವಾರ್ಯವಾಗಿ ಸೋರುವ ಬಸ್‌ನಲ್ಲಿ ಕೊಡೆ ಹಿಡಿದುಕೊಂಡು ಕಾಲೇಜಿಗೆ ಹೋಗಬೇಕಾಯಿತು.

ಬಸ್ ಉಳಗಾ ತಲುಪುವಾಗಲೇ ಪರೀಕ್ಷೆ ಪ್ರಾರಂಭವಾಗಿತ್ತು.ಬಸ್ಸಿನ ಅವ್ಯವಸ್ಥೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಅದೇ ಬಸ್ಸಿನಲ್ಲಿ ಬಂದು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಬಸ್ಸಿನ ಗಾಜು ಒಡೆದು ಹಾಕಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಾನೂನು ಕೈಗೆ ತೆಗೆದುಕೊಳ್ಳದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ಬಳಿಕ ಕಾರವಾರ ಘಟಕದ ಡಿಪೋ ವ್ಯವಸ್ಥಾಪಕ ಬಾನಾವಳಿಕರ್ ಸ್ಥಳಕ್ಕೆ ಬಂದು ಹಳಗಾಕ್ಕೆ ಬೇರೆ ಬಸ್ ಬಿಡಲಾಗುವುದು ಎಂದು ಹೇಳಿದ ನಂತರ ವಿದ್ಯಾರ್ಥಿಗಳು ಅಲ್ಲಿಂದ ತೆರಳಿದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ವಿಕಾಸ ತಳೇಕರ್, ಸಂದೇಶ ಬಾಡ್ಕರ್, ಸುದನ್ ಕೊಠಾರಕರ್ ಹಾಗೂ ಸುರೇಂದ್ರ ಗಾಂವಕರ್ ಹಾಜರಿದ್ದರು.

ಎರಡು ದಿನದ ಹೈನುಗಾರಿಕೆ ತರಬೇತಿ
ಕಾರವಾರ: ಇದೇ 20ರಿಂದ 22ರ ವರೆಗೆ ರೈತರಿಗಾಗಿ ಮೂರು ದಿನಗಳ ಹೈನುಗಾರಿಕೆ ತರಬೇತಿಯನ್ನು ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಗೋಧಿ ಸಂಶೋಧನಾ ಕೇಂದ್ರದ ಹಿಂಭಾಗ, ಕೃಷಿ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಆಯೋಜಿಸಲಾಗಿದೆ. ಆಸಕ್ತರು ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ಗ್ಯಾಸ್ ಬುಕ್ಕಿಂಗ್‌ಗೆ ಎಸ್‌ಎಂಎಸ್ ಸೌಲಭ್ಯ
ಕಾರವಾರ: ಮೊಬೈಲ್ ಎಸ್‌ಎಂಎಸ್, ಸ್ಥಿರ ದೂರವಾಣಿ ಕರೆ, ಸ್ವಂತ ಫೋಟೋ ಇರುವ ನೀಲಿ ರೇಷನ್ ಕಾರ್ಡ್ ಮೂಲಕ ಅಡುಗೆ ಅನಿಲದ ಸಿಲಿಂಡರ್ ಬುಕ್ಕಿಂಗ್ ಮಾಡಬಹುದು ಎಂದು ಜನತಾ ಬಜಾರ್‌ದ ಭಾರತ್ ಗ್ಯಾಸ್ ವಿತರಕರು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.