ADVERTISEMENT

ಸ್ವಾತಂತ್ರ್ಯ ಭವನ ನವೀಕರಣ: ಜಿಲ್ಲಾಧಿಕಾರಿ ಸಭೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 7:00 IST
Last Updated 26 ಸೆಪ್ಟೆಂಬರ್ 2011, 7:00 IST

ಅಂಕೋಲಾ: ನಗರದ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಸಂಗ್ರಾಮ ಭವನವನ್ನು ನವೀಕರಿಸುವ ಕುರಿತು ಶನಿವಾರ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯನವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.  ಸರ್ಕಾರ 1 ಕೋಟಿ ರೂಪಾಯಿಗಳನ್ನು ಈ ಕಾರ್ಯಕ್ಕೆ ಬಿಡುಗಡೆಗೊಳಿಸಿದ್ದು, ನವೀಕರಣದ ವಿನ್ಯಾಸವನ್ನು ಹುಬ್ಬಳ್ಳಿಯ ಭೂಮರೆಡ್ಡಿ ಅಭಿಯಾಂತ್ರಿಕ ಕಾಲೇಜಿನ ವಾಸ್ತುಶಿಲ್ಪಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಅರವಿಂದ ಗಲಗಲಿ ರೂಪಿಸಿಕೊಡಲಿದ್ದಾರೆ.  

 ಈ ಕುರಿತ ಮಾದರಿಗಳನ್ನು ಸಭೆಯಲ್ಲಿ ಅರವಿಂದ ಅವರು ಪ್ರದರ್ಶಿಸಿದರು. ಸ್ವಾತಂತ್ರ್ಯ ಭವನ ಸಮಿತಿ ಕಾರ್ಯದರ್ಶಿಗಳಾದ ತಹಸೀಲ್ದಾರ ಡಾ. ಉದಯಕುಮಾರ ಶೆಟ್ಟಿ ಜುಲೈ ತಿಂಗಳಿನಲ್ಲಿ ಜರುಗಿದ ಸಭೆಯ ನಡಾವಳಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.  

 ಲೋಕೋಪಯೋಗಿ ಇಲಾಖೆಯವರು ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸುವುದು, ಮಹಾತ್ಮಾ ಗಾಂಧೀಜಿಯವರ ಹಾಗೂ ಈ ಪ್ರದೇಶದ ಸ್ವಾತಂತ್ರ್ಯ ಯೋಧರ ದಾಪುಗಾಲಿನ ಕಂಚಿನ ಪ್ರತಿಮೆಗಳನ್ನು ನಿರ್ಮಿಸುವುದು, ವಸ್ತುಸಂಗ್ರಹಾಲಯ, ಗ್ರಂಥಾಲಯ, ಅತಿಥಿಗೃಹ ಮುಂತಾದವುಗಳ ನಿರ್ಮಾಣ ಕುರಿತು ವಿವರಿಸಿದರು.

ಸ್ವಾತಂತ್ರ್ಯ ಭವನದ ಕಟ್ಟದಲ್ಲಿ ಕಳೆದ ಮೂರು ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ.  ಇದಕ್ಕೆ ಬಾಡಿಗೆ ನಿಗದಿಪಡಿಸಿ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ಜಿಲ್ಲಾಧಿಕಾರಿಗಳು ತಹಸೀಲ್ದಾರರಿಗೆ ಸೂಚಿಸಿದರು. 

ಸಭೆಯಲ್ಲಿ ಸತ್ಯಾಗ್ರಹ ಸ್ಮಾರಕ ಸಮಿತಿಯ ಹಿರಿಯರಾದ ವಿ.ಜೆ. ನಾಯಕ, ಲೋಕೋಪಯೋಗಿ ಇಂಜಿನಿಯರ್ ವಿ.ವಿ. ನವಲೆ, ನಿರ್ಮಿತಿ ಇಲಾಖೆಯ ಯೋಜನಾಧಿಕಾರಿ ಶಂಕರಲಿಂಗ ಗೋಗಿ. ಪಟ್ಟಣ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾರ್ವೇಕರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.