ADVERTISEMENT

‘ಆರ್ಥಿಕ ಸಂಕಷ್ಟದಲ್ಲಿ ಭಾರತ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:46 IST
Last Updated 16 ಸೆಪ್ಟೆಂಬರ್ 2013, 8:46 IST

ಕಾರವಾರ: ‘ಅವೈಜ್ಞಾನಿಕ ಆರ್ಥಿಕ ನೀತಿಯಿಂದಾಗಿ ಭಾರತ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೈಗಾರಿಕೆಗಳಲ್ಲಿ ವಸ್ತುಗಳ ಉತ್ಪಾದನೆ ಹೆಚ್ಚಾಗದೇ ಇದ್ದಲ್ಲಿ ದೇಶದ ಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ’ ಎಂದು ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.

ಸಿಪಿಎಂ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ  ರಾಜಕೀಯ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ರಪ್ತುಗಿಂತ ಆಮದು ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಆರ್ಥಿಕ ಬಿಕ್ಕಟ್ಟು ಉದ್ಭವಿಸಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲಾಗದಂತಹ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ರೂಪಾಯಿ ಅಪಮೌಲ್ಯ, ಬೆಲೆ ಏರಿಕೆಯಿಂದ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ದೇಶ ಆಳುವ ಪಕ್ಷಗಳ ನಾಯಕರು ಮಾತ್ರ ಪ್ರಧಾನಿ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸುತ್ತಿದ್ದಾರೆ. ದೇಶ ಉದ್ಧಾರ ಆಗಬೇಕಾದರೆ ದೇಶದ ನೀತಿ ಬದಲಾಗಬೇಕೇ ಹೊರತು ವ್ಯಕ್ತಿ ಬದಲಾವಣೆಯಿಂದ ಸಾಧ್ಯವಿಲ್ಲ’ ಎಂದರು.

ಕೃಷಿ ವಲಯ ಕ್ಷೀಣ: ‘ಬಹುರಾಷ್ಟ್ರೀಯ ಕಂಪೆನಿಗಳಿಗೆ ರೆೈತರ ಕೃಷಿ ಭೂಮಿಯನ್ನು ಕಡಿಮೆ ದರದಲ್ಲಿ ನೀಡಿ ಉದ್ಯಮಿಗಳನ್ನು ಬೆಳೆಸಲಾಗುತ್ತಿದೆ. ಇದರಿಂದ ಕೃಷಿ ವಲಯ ಕ್ಷೀಣಿಸುತ್ತಿದ್ದು, ದಿನಕ್ಕೆ ಶೇ12 ರಷ್ಟು ಮಂದಿ ರೈತರು ಬೇರೆ ಕ್ಷೇತ್ರಕ್ಕೆ ವಲಸೆ ಹೋಗುತ್ತಿದ್ದಾರೆ. ಈಗ ದೇಶದಲ್ಲಿ ಇರುವ ನಿಜವಾದ ರೈತರ ಸಂಖ್ಯೆ ಕೇವಲ ಶೇ 8 ಮಾತ್ರ’ ಎಂದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ಯಮುನಾ ಗಾಂವಕರ, ಮಂಜುನಾಥ ಪುರಕರ, ತಿಲಕ ಗೌಡ, ಸುಭಾಷ ಕೊಪ್ಪಿಕರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.