ADVERTISEMENT

ಶಿರಸಿ: ಮೌಲ್ಯಮಾಪನಕ್ಕೆ 104 ಶಿಕ್ಷಕರು ಗೈರು

ಕಾರಣ ಕೇಳಿ ನೋಟಿಸ್ ಜಾರಿ: ಡಿಡಿಪಿಐ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 14:03 IST
Last Updated 13 ಜುಲೈ 2020, 14:03 IST
ಶಿರಸಿಯಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಹಾಜರಾದ ಶಿಕ್ಷಕಿಯರು ಸರದಿಯಲ್ಲಿ ಬಂದರು
ಶಿರಸಿಯಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಹಾಜರಾದ ಶಿಕ್ಷಕಿಯರು ಸರದಿಯಲ್ಲಿ ಬಂದರು   

ಶಿರಸಿ: ಕೋವಿಡ್ 19 ಸಂದರ್ಭದಲ್ಲಿ ಎಲ್ಲ ರೀತಿ ಸುರಕ್ಷತಾ ಕ್ರಮಗಳೊಂದಿಗೆ, ನಗರದ ಆರು ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಸೋಮವಾರದಿಂದ ಆರಂಭವಾಗಿದೆ. ಮೌಲ್ಯಮಾಪನ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ 857 ಶಿಕ್ಷಕರಲ್ಲಿ, 753 ಜನರು ಮಾತ್ರ ಹಾಜರಾಗಿದ್ದರು.

ಸರ್ಕಾರಿ ಉರ್ದು ಪ್ರೌಢಶಾಲೆ, ಆವೆಮರಿಯಾ, ಲಯನ್ಸ್, ಎಂಇಎಸ್ ಪ್ರೌಢಶಾಲೆ, ಮಾರಿಕಾಂಬಾ ಪ್ರೌಢಶಾಲೆಯ ಎರಡು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ‘ಶಾರೀರಿಕ ಅಂತರ ಕಾಪಾಡುವ ಉದ್ದೇಶದಿಂದ ಒಂದು ಕೊಠಡಿಯಲ್ಲಿ 12 ಉಪ ಮುಖ್ಯ ಮೌಲ್ಯಮಾಪಕರು, ಇಬ್ಬರು ಉಪ ಮುಖ್ಯಸ್ಥರಿಗೆ ಮಾತ್ರ ಕುಳಿತುಕೊಳ್ಳಲು ವ್ಯವಸ್ಥೆಗೊಳಿಸಲಾಗಿದೆ. ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಶಿಕ್ಷಕರು ಕುಳಿತುಕೊಳ್ಳುವ ಕೊಠಡಿಗೆ ನೇರವಾಗಿ ವಿತರಿಸಲಾಗಿದೆ. ಭದ್ರತಾ ಕೊಠಡಿಯ ಒಳಗೆ ಐವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

ಒಟ್ಟು ಎಂಟು ವಿಷಯಗಳ ಮೌಲ್ಯಮಾಪನ ನಡೆಯುತ್ತದೆ. ಮೌಲ್ಯಮಾಪಕರು ನೀರು, ಊಟ, ಸ್ಯಾನಿಟೈಸರ್‌ಗಳನ್ನು ಸ್ವತಃ ತಂದುಕೊಳ್ಳಲು ತಿಳಿಸಲಾಗಿದೆ. ಭಾಷಾ ವಿಷಯಗಳು ಐದು ದಿನಗಳಲ್ಲಿ, ಕೋರ್ ವಿಷಯಗಳು ಏಳು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಕೆಲವು ಶಿಕ್ಷಕಿಯರು ಸಣ್ಣ ಮಗುವಿರುವ ಕಾರಣ ನೀಡಿ ಮೌಲ್ಯಮಾಪನಕ್ಕೆ ಗೈರಾಗಿದ್ದಾರೆ. 55 ವ‌ರ್ಷ ಮೇಲ್ಪಟ್ಟವರು, ಹೊರ ಊರಿನಲ್ಲಿ ಇರುವುದಾಗಿ ಹೇಳಿಕೊಂಡ ಕೆಲವರು ಮೌಲ್ಯಮಾಪನದಿಂದ ಹೊರಗುಳಿದಿದ್ದಾರೆ. ಗೈರಾಗಿರುವವರು ಪ್ರೌಢ ಶಿಕ್ಷಣ ಮಂಡಳಿಗೆ ವಿವರ ನೀಡಬೇಕಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‌ಸ್ಯಾನಿಟೈಸರ್ ಕೊಡುಗೆ

ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಬಂದ ಶಿಕ್ಷಕರ ಸುರಕ್ಷತೆ ದೃಷ್ಟಿಯಿಂದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು ಸ್ಯಾನಿಟೈಸರ್ ಬಾಟಲಿಗಳನ್ನು ಉಚಿತವಾಗಿ ನೀಡಿದರು. ಡಿಡಿಪಿಐ ದಿವಾಕರ ಶೆಟ್ಟಿ ಇದನ್ನು ಸ್ವೀಕರಿಸಿದರು. ಕಾಂಗ್ರೆಸ್ ಪ್ರಮುಖರಾದ ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಬಸವರಾಜ ದೊಡ್ಮನಿ, ಪ್ರಸನ್ನ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.