ADVERTISEMENT

80ರ ಹರೆಯದಲ್ಲೂ ‘ಭತ್ತ’ದ ಕೃಷಿ ಒಲವು

ಕಾರವಾರ ತಾಲ್ಲೂಕಿನ ಸಿದ್ದರದಲ್ಲಿ ಕೃಷಿಯಲ್ಲಿ ತೊಡಗಿಕೊಂಡ ಕೆ.ಡಿ.‍‍ಪೆಡ್ನೇಕರ್

ಸದಾಶಿವ ಎಂ.ಎಸ್‌.
Published 22 ಜುಲೈ 2019, 19:30 IST
Last Updated 22 ಜುಲೈ 2019, 19:30 IST
ಕಾರವಾರ ತಾಲ್ಲೂಕಿನ ಸಿದ್ದರದಲ್ಲಿ ಕೆ.ಡಿ.ಪೆಡ್ನೇಕರ್ ಅವರ ಹೊಲದಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿರುವುದು.
ಕಾರವಾರ ತಾಲ್ಲೂಕಿನ ಸಿದ್ದರದಲ್ಲಿ ಕೆ.ಡಿ.ಪೆಡ್ನೇಕರ್ ಅವರ ಹೊಲದಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿರುವುದು.   

ಕಾರವಾರ: ಅವರದೇಹಕ್ಕೆ 80ರ ಹರೆಯ. ಆದರೆ, ಮನಸ್ಸು ಮಾತ್ರ 18ರಆಸುಪಾಸಿನ ಯುವಕನಂತೆ ಹುಮ್ಮಸ್ಸಿನಿಂದ ಕೂಡಿದೆ. ಪಾಳುಬಿದ್ದಿದ್ದ ಗದ್ದೆಯನ್ನು ಅದೇ ಉತ್ಸಾಹದಲ್ಲಿ ಉಳುಮೆ ಮಾಡಿ ಭತ್ತದ ಕೃಷಿ ಮಾಡಿದ್ದಾರೆ.

ನಗರದ ಡಾ.ಕಮಲಾಕರ ರಸ್ತೆಯ ನಿವಾಸಿ ಕೆ.ಡಿ.‍‍ಪೆಡ್ನೇಕರ್, ತಾಲ್ಲೂಕಿನ ಸಿದ್ದರದಲ್ಲಿ ಒಂದು ಎಕರೆ 15 ಗುಂಟೆ ಗದ್ದೆಯಲ್ಲಿ ಬೇಸಾಯ ಮಾಡಿದ್ದಾರೆ. ಏಳೆಂಟು ವರ್ಷಗಳ ಹಿಂದೆ ಈ ಜಮೀನನ್ನು ಖರೀದಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಕೃಷಿಯತ್ತ ಹೊರಳಿದ್ದಾರೆ. ಇದೇರೀತಿ, ದೇವಳಮಕ್ಕಿಯಲ್ಲೂ ಭತ್ತದ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಭೂಮಿಯನ್ನು ಬಂಜರಾಗದಂತೆ ನೋಡಿಕೊಳ್ಳುವ ಆಶಯ ಹೊಂದಿದ್ದಾರೆ.

ಮನೆಯಲ್ಲಿ ನಾಲ್ವರು ವೈದ್ಯರು!:ಬಿ.ಎಸ್ಸಿ ಪದವೀಧರರಾಗಿರುವ ಅವರು,ಕಾರವಾರದಕೇಶವ ಗಜಾನನ ಸಬ್ನೀಸ್ (ಈಗಿನ ಸರ್ಕಾರಿ ಕಾಲೇಜು) ಕಾಲೇಜಿನಲ್ಲಿ ಪ್ರಾಣಿ ವಿಜ್ಞಾನ ವಿಭಾಗದ ಸಹಾಯಕರಾಗಿ 11 ವರ್ಷ ಕರ್ತವ್ಯ ನಿರ್ವಹಿಸಿದ್ದರು. ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ವಿದ್ಯಾಸಂಸ್ಥೆಗಳಿಗೆ ಪ್ರಯೋಗಾಲಯದ ಸಲಕರಣೆಗಳನ್ನು ಪೂರೈಕೆ ಮಾಡುವ ವ್ಯವಹಾರ ಮಾಡಿದರು. ಅವರ ಒಬ್ಬ ಪುತ್ರ, ಸೊಸೆ, ಮಗಳು ಮತ್ತು ಅಳಿಯ ವೈದ್ಯರು. ಮತ್ತೊಬ್ಬ ಪುತ್ರ ವಿದೇಶದಲ್ಲಿ ಎಂಜಿನಿಯರ್ ಆಗಿದ್ದಾರೆ.

ADVERTISEMENT

‘ನಾನು ನನ್ನ ಜಮೀನಿನಲ್ಲಿ ಭತ್ತ ಬೆಳೆಯಬೇಕು ಎಂದು ಊರಿನ ಜನರಲ್ಲಿ ಹೇಳಿದಾಗ ಎಲ್ಲರೂ ಸಹಕಾರ ನೀಡಿದರು. ಜಯಾ ತಳಿಯ ಬಿತ್ತನೆ ಬೀಜವನ್ನು ಖರೀದಿಸಿ ನಾಟಿ ಮಾಡಲಾಗಿದೆ. ಬೇಸಿಗೆಯಲ್ಲಿ ನೀರಾವರಿ ವ್ಯವಸ್ಥೆಗೆ ಬಾವಿ ಕೊರೆಯಿಸಿದ್ದೇನೆ. ಕಾಡು ಪ್ರಾಣಿಗಳಿಂದ ರಕ್ಷಣೆಗೆ ಹೊಲಕ್ಕೆ ಬೇಲಿ ಅಳವಡಿಸಿದ್ದೇನೆ. ಅದರ ಸಮೀಪದಲ್ಲೇ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ’ ಎಂದು ಪಡ್ನೇಕರ್ ತಿಳಿಸಿದರು.

‘ಇತರರಿಗೂ ಪ್ರೇರಣೆ ಸಿಗಲಿ’:‘ನಾನು ಲಾಭದ ದೃಷ್ಟಿಯಿಂದ ವ್ಯವಸಾಯ ಮಾಡುತ್ತಿಲ್ಲ. ನನಗೆ ಇದರಿಂದ ಅಕ್ಕಿ ಸಿಗುತ್ತದಲ್ಲ? ನನ್ನ ಜಮೀನಿನ ಸುತ್ತಮುತ್ತ ನೂರಾರು ಎಕರೆ ಹೊಲಗದ್ದೆಗಳು ಕೃಷಿ ಮಾಡದೇ ಖಾಲಿ ಬಿದ್ದಿವೆ.ಅವುಗಳ ಮಾಲೀಕರಲ್ಲಿ ಕೆಲವರು ಸುತ್ತಮುತ್ತ ಇದ್ದಾರೆ. ಮತ್ತೆ ಕೆಲವರು ಗೋವಾ, ಮುಂಬೈನಂತಹ ಊರುಗಳಲ್ಲಿದ್ದಾರೆ. 80 ವರ್ಷದ ನಾನು ಕೃಷಿ ಮಾಡಿದ್ದನ್ನು ನೋಡಿ ಅವರಿಗೂ‍ಪ್ರೇರಣೆ ಸಿಗಬಹುದು. ಪ್ರಧಾನಿ ಮೋದಿ ಹೇಳಿದಂತೆ ಜಮೀನನ್ನು ಹಾಳಾಗಲು ಬಿಡಬಾರದು ಎಂದು ಸಂಕಲ್ಪ ಮಾಡಿದ್ದೇನೆ’ ಎಂದು ಪೆಡ್ನೇಕರ್ ವಿವರಿಸಿದರು.

ಕ್ರಿಯಾಶೀಲ ವ್ಯಕ್ತಿ:ಕೂಲಿಯಾಳುಗಳ ಜೊತೆ ಸ್ವತಃ ಗದ್ದೆಗಿಳಿಯುವ ಪೆಡ್ನೇಕರ್, ಸದಾ ಕ್ರಿಯಾಶೀಲರಾಗಿರುತ್ತಾರೆ. ಸಮೀಪದ ಕಿವುಡ ಮತ್ತು ಮೂಕರ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೆನ್,ನೋಟ್‌ಬುಕ್ ವಿತರಿಸಿದ್ದಾರೆ. ಪಹರೆ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಭಂಡಾರಿಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ತಮ್ಮ ಹೊಲದಲ್ಲಿ ಕೆ.ಡಿ.‍‍ಪೆಡ್ನೇಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.