ADVERTISEMENT

ಬಿಜೆಪಿ ಮುಖಂಡರ ಮನೆ ಮೇಲೆ ಜಂಟಿ ದಾಳಿ: ₹ 82.70 ಲಕ್ಷ ವಶ

ಬಿಜೆಪಿ ಮುಖಂಡರ ಮನೆ ಮೇಲೆ ಜಂಟಿ ದಾಳಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 18:10 IST
Last Updated 17 ಏಪ್ರಿಲ್ 2019, 18:10 IST
   

ಶಿರಸಿ/ಕಾರವಾರ: ಚುನಾವಣಾ ಕರ್ತವ್ಯದಲ್ಲಿರುವ ಸ್ಥಳೀಯ ವಿಚಕ್ಷಣಾ ದಳ (ಫ್ಲೈಯಿಂಗ್ ಸ್ಕ್ವಾಡ್‌) ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಇಲ್ಲಿನ ಬಿಜೆಪಿ ಮುಖಂಡರ ಮನೆಯ ಮೇಲೆ ನಡೆಸಿದ್ದ ಜಂಟಿ ದಾಳಿಯಲ್ಲಿ ₹ 82.70 ಲಕ್ಷ ನಗದು ಹಾಗೂ 560 ಗ್ರಾಂ ಬಂಗಾರದ ಆಭರಣ, 100 ಗ್ರಾಂ ಬಂಗಾರದ ಗಟ್ಟಿ ವಶಪಡಿಸಿಕೊಂಡಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣ ದೇವಾಡಿಗ ಎಸಳೆ ಅವರ ವಾಹನದಲ್ಲಿ ಪ್ರತಿ ಕವರ್‌ನಲ್ಲಿ ₹ 5000ದಂತೆ ಒಟ್ಟು ₹ 9.20 ಲಕ್ಷ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಮಾಕಾಂತ ವಿ.ಹೆಗಡೆ ಚಿಪಗಿ ಅವರ ಮನೆಯಲ್ಲಿ ₹ 71 ಲಕ್ಷ ಹಣ ದೊರೆತಿದೆ. ಇದನ್ನು ಬೂತ್ ಮಟ್ಟದಲ್ಲಿ ಹಾಗೂ ಮತದಾರರಿಗೆ ಹಂಚಿಕೆ ಮಾಡಲು ತಂದಿದ್ದು, ಆಧರೆ, ಇದು ನಿರ್ದಿಷ್ಟ ಅಭ್ಯರ್ಥಿಗೆ ಸಂಬಂಧಿಸಿದ ಹಣ ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ಜಿಲ್ಲಾ ನೋಡಲ್ ಅಧಿಕಾರಿ, ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಸೌರಭ ನಾಯಕ ದಾಖಲಿಸಿಕೊಂಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಚುನಾವಣೆ ಸಂದರ್ಭದಲ್ಲಿ ಹಂಚಿಕೆ ಮಾಡಲು ಹಣ ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಅಧರಿಸಿ, ವಿಚಕ್ಷಣಾ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ವಾಹನದಲ್ಲಿ ₹ 9ಲಕ್ಷಕ್ಕೂ ಅಧಿಕ ಹಣ ದೊರೆತಿತ್ತು. ನಂತರ ಪ್ರಕರಣವನ್ನು ಐಟಿ ಅಧಿಕಾರಿಗಳಿಗೆ ಒಪ್ಪಿಸಲಾಯಿತು. ಮತ್ತಷ್ಟು ತನಿಖೆ ನಡೆಸಿದಾಗ ತೋಟದ ಮನೆಯಲ್ಲೂ ಹಣ ದೊರೆಯಿತು. ಇದು ಸಂಪೂರ್ಣವಾಗಿ ಐಟಿಗೆ ಸಂಬಂಧಿಸಿದ ವಿಚಾರವಾಗಿದೆ.

ADVERTISEMENT

ಈ ಕುರಿತು ತನಿಖೆ ನಡೆಯುತ್ತಿದೆ. ವಿಚಕ್ಷಣಾ ದಳ ನಡೆಸಿದ ದಾಳಿ ಆಧಾರದಲ್ಲಿ ದೂರು ದಾಖಲಿಸಲಾಗಿದೆ. ಐಟಿ ಅಧಿಕಾರಿಗಳು ಶೀಘ್ರ ಪ್ರಾಥಮಿಕ ವರದಿ ಕೊಡುವುದಾಗಿ ತಿಳಿಸಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಹರೀಶಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಶಿರಸಿಯ ಕೃಷ್ಣ ಎಸಳೆ ಅವರ ಮನೆ ಎದುರು ಇದ್ದ ಅಧಿಕಾರಿಗಳ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.