ADVERTISEMENT

ಯಲ್ಲಾಪುರ: ಕರಡಿ ದಾಳಿ, ಯುವಕನಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 9:47 IST
Last Updated 8 ಸೆಪ್ಟೆಂಬರ್ 2022, 9:47 IST
ಹುಬ್ಬಳ್ಳಿಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ
ಹುಬ್ಬಳ್ಳಿಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ    

ಯಲ್ಲಾಪುರ: ತಾಲ್ಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿಯ ಕೊಡಸೇ ಗ್ರಾಮದ ಜನಶೆಟ್ಟಕೊಪ್ಪ ಮಜಿರೆಯಲ್ಲಿ ಯುವಕನ ಮೇಲೆ ಗುರುವಾರ ಕರಡಿ ದಾಳಿ ಮಾಡಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುವನ್ನು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿರುವ ಎ.ಪಿ.ಎಂ.ಸಿ ಸದಸ್ಯ ಲಾರೇನ್ಸ್ ಸಿದ್ದಿ ಪುತ್ರ ಸಂತೋಷ್ ಲಾರೆನ್ಸ್ ಸಿದ್ದಿ (26) ಎಂದು ಗುರುತಿಸಲಾಗಿದೆ. ಜನಶೆಟ್ಟಿಕೊಪ್ಪದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ.

ಸುರೇಶ ಸಿದ್ದಿಯ ತಲೆ ಮುಖ ಹಾಗೂ ಕಣ್ಣಿಗೆ ಭಾರಿ ಪ್ರಮಾಣದಲ್ಲಿ ಗಾಯಗಳಾಗಿದ್ದು, ಗಾಯಾಳುವನ್ನು ಯಲ್ಲಾಪುರದ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಲ್.ಎ.ಮಠ, ಉಪ ವಲಯ ಅರಣ್ಯಾಧಿಕಾರಿಗಳಾದ ನಾಗರಾಜ ಕಲಗುಟಕರ ಹಾಗೂ ಶ್ರೀನಿವಾಸ ನಾಯ್ಕ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇತ್ತೀಚಿನ ಕೆಲವು ತಿಂಗಳಿಗಳಿಂದ ಕೊಡಸೆ ಕಣ್ಣಿಗೇರಿ ಭಾಗದಲ್ಲಿ ಕರಡಿ ಹಾಗೂ ಚಿರತೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದ್ದು, ಪ್ರತಿದಿನ ರಾತ್ರಿ ಗ್ರಾಮದ ಒಂದೆರಡು ನಾಯಿಗಳನ್ನು ಚಿರತೆ ಎತ್ತಿಕೊಂಡು ಹೋಗುತ್ತಿದೆ. ವನ್ಯಪ್ರಾಣಿಗಳಿಂದಾಗಿ ಅರಣ್ಯದಂಚಿನ ಗದ್ದೆಗಳಲ್ಲಿ ಕೆಲಸ ಮಾಡಲು ರೈತರು ಭಯ ಪಡುತ್ತಿದ್ದಾರೆ ಎಂದು ಸ್ಥಳೀಯರಾದ ವಾಸುದೇವ್ ಮಾಪ್ಸೇಕರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.