
ಕಾರವಾರ: ಕೆಲ ವರ್ಷಗಳ ಹಿಂದೆ ನಗರದ ಜನದಟ್ಟಣೆಯ ಕಾಲೊನಿಗಳಲ್ಲಿ ಒಂದಾಗಿದ್ದ ಇಲ್ಲಿನ ಸೋನಾರವಾಡಾದಲ್ಲಿರುವ ಪಿ ಆ್ಯಂಡ್ ಟಿ ವಸತಿಗೃಹ (ಪೋಸ್ಟ್ ಮತ್ತು ಟೆಲಿಗ್ರಾಫ್) ಈಗ ಹಾಳುಕೊಂಪೆಯಾಗಿದೆ. ಅಷ್ಟೇ ಅಲ್ಲ, ಸುತ್ತಲಿನ ಜನವಸತಿ ಪ್ರದೇಶಗಳಿಗೆ ಈ ಪ್ರದೇಶ ದೊಡ್ಡ ತಲೆನೋವಾಗಿ ಪರಿಣಮಿಸಿದೆ!
ಬಿಎಸ್‌ಎನ್‌ಎಲ್ ಸುಪರ್ದಿಯಲ್ಲಿರುವ, ಹಲವು ವಸತಿಗೃಹಗಳ ಕಾಲೊನಿಯಲ್ಲಿನ ಬಳಕೆಯಾಗದ ಹತ್ತಾರು ವಸತಿಗೃಹಗಳ ಮೇಲೆ ಗಿಡಮರಗಳು ಬೆಳೆದುನಿಂತಿವೆ. ಜನರ ಓಡಾಟ ಕಡಿಮೆ ಆಗಿದ್ದರಿಂದ ಇಡೀ ಪ್ರದೇಶದಲ್ಲಿ ಆಳೆತ್ತರದ ಮರಗಳು ಬೆಳೆದು ನಿಂತಿದ್ದು, ಪುಟ್ಟ ಕಾಡು ಸೃಷ್ಟಿಯಾಗಿದೆ.
‘ಸರ್ಕಾರಿ ವಸತಿಗೃಹಗಳಲ್ಲಿ ಕೆಲ ವರ್ಷಗಳ ಹಿಂದೆ ನೌಕರರು, ಅವರ ಕುಟುಂಬ ವರ್ಗ ವಾಸವಿತ್ತು. ಜನರ ಓಡಾಟ ಹೆಚ್ಚಿತ್ತು. ಈಚಿನ ವರ್ಷದಲ್ಲಿ ಬೆರಳೆಣಿಕೆಯಷ್ಟು ವಸತಿಗೃಹಗಳಲ್ಲಿ ನೌಕರರು ವಾಸವಿದ್ದಾರೆ. ಬಹುತೇಕ ವಸತಿಗೃಹಗಳು ಖಾಲಿ ಇವೆ. ನಿರ್ವಹಣೆ ಇಲ್ಲದ ಕಾರಣದಿಂದ ಕಟ್ಟಡದ ಮೇಲೆಲ್ಲ ಗಿಡಗಂಟಿಗಳು ಬೆಳೆದಿವೆ. ಹೊರ ಆವರಣದಲ್ಲಿ ನೀರು ನಿಂತು ಕೆರೆಯಾಗಿ ಮಾರ್ಪಟ್ಟಿದೆ. ನೂರಾರು ಸರಿಸೃಪಗಳಿಗೆ ಇದು ಆವಾಸ ಸ್ಥಾನವಾಗಿದೆ. ಸಮೀಪದ ಪೋರ್ಟ್ ಕಾಲೊನಿ, ಸೋನಾರವಾಡಾದ ಮನೆಗಳಿಗೆ ಹಾವು, ಚೇಳು ನುಗ್ಗುವುದು ಹೆಚ್ಚುತ್ತಿದೆ’ ಎಂದು ಸೋನಾರವಾಡಾದ ಲೋಕೇಶ ಪಾವಸ್ಕರ ದೂರಿದರು.
‘ಪಾಳುಬಿದ್ದ ಪಿ ಆ್ಯಂಡ್ ಟಿ ವಸತಿಗೃಹ ಈ ಪ್ರದೇಶದಲ್ಲಿ ಜನವಸತಿಗೆ ಆತಂಕದ ವಾತಾವರಣ ಸೃಷ್ಟಿಸಿದೆ. ಇದರಿಂದಾಗಿ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಬಾಡಿಗೆಗೆ ಜನರು ಬರುತ್ತಿಲ್ಲ’ ಎಂದು ಸುನೀತಾ ಬಾಂದೇಕರ ಹೇಳಿದರು.
1980ರ ದಶಕದಲ್ಲಿ ನಿರ್ಮಾಣಗೊಂಡ ಪಿ ಆ್ಯಂಡ್ ಟಿ ವಸತಿಗೃಹದಲ್ಲಿ 60ಕ್ಕೂ ಹೆಚ್ಚು ಮನೆಗಳಿದ್ದು, ನೂರಾರು ಜನರು ವಾಸವಿದ್ದರು. 2010ರ ಬಳಿಕ ಈ ಕಟ್ಟಡಗಳಲ್ಲಿ ಜನವಸತಿ ಪ್ರಮಾಣ ತಗ್ಗಿತು. ಬಿಎಸ್ಎನ್ಎಲ್‌ನ ಹಲವು ನೌಕರರು ಸ್ವಯಂ ನಿವೃತ್ತಿ ಘೋಷಿಸಿದ್ದರಿಂದ ಕಟ್ಟಡದ ಬಳಕೆ ಕಡಿಮೆಯಾಯಿತು. ನಿರ್ವಹಣೆಗೂ ಅನುದಾನ ಸಿಗದೆ ಕಟ್ಟಡ ಈ ಸ್ಥಿತಿಗೆ ತಲುಪಿದೆ ಎಂದು ಬಿಎಸ್‌ಎನ್‌ಎಲ್‌ನ ಕಿರಿಯ ಅಧಿಕಾರಿಯೊಬ್ಬರು ಹೇಳಿದರು.
ಕಾರವಾರದ ಸೋನಾರವಾಡಾದಲ್ಲಿರುವ ಪಿ ಆ್ಯಂಡ್ ಟಿ ವಸತಿಗೃಹದ ಸುತ್ತ ಕಾಡಿನಂತೆ ಗಿಡಮರಗಳು ಬೆಳೆದಿದ್ದು ಎದುರಿನಲ್ಲಿ ಮಳೆನೀರು ನಿಂತು ಕೆರೆಯಂತಾಗಿರುವುದು
ವಸತಿಗೃಹದ ಬಳಕೆಯಾಗದ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಈ ಹಿಂದೆಯೇ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಕೇಂದ್ರ ಕಚೇರಿಯಿಂದ ಅನುಮತಿ ಸಿಕ್ಕ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆಮಲ್ಲಿಕಾರ್ಜುನ ತಾಳಿಕೋಟೆ ಬಿಎಸ್ಎನ್ಎಲ್ ಡಿಜಿಎಂ
ನಿರ್ವಹಣೆಗೆ ಹಲವು ಬಾರಿ ಸೂಚನೆ
‘ಪಿ ಆ್ಯಂಡ್ ಟಿ ವಸತಿಗೃಹದ ಕಾಲೊನಿ ನಿರ್ವಹಣೆ ಇಲ್ಲದೆ ಪಾಳುಕೊಂಪೆಯಾಗಿದ್ದರಿಂದ ಅಕ್ಕಪಕ್ಕದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರು ಸಲ್ಲಿಕೆಯಾಗಿವೆ. ಈ ಪ್ರದೇಶದ ಗಿಡಗಂಟಿ ತೆರವುಗೊಳಿಸಿ ಶುಚಿಯಾಗಿಟ್ಟುಕೊಳ್ಳಲು ಬಿಎಸ್‌ಎನ್ಎಲ್‌ಗೆ ಹಲವು ಬಾರಿ ಸೂಚಿಸಲಾಗಿತ್ತು. ಆದರೂ ಸ್ಪಂದಿಸಿಲ್ಲ. ಖಾಲಿ ವಸತಿಗೃಹಗಳನ್ನು ನಗರಸಭೆ ನೌಕರರ ಬಳಕೆಗೆ ನೀಡುವ ಬಗ್ಗೆಯೂ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೂ ನಿಯಮಾವಳಿ ಅಡ್ಡಿಯಾಗುತ್ತದೆ ಎಂಬ ಕಾರಣ ನೀಡಿ ನಿರಾಕರಿಸಿದ್ದರು’ ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.