ಹಳಿಯಾಳ: ‘ವಸತಿ ಶಾಲೆಯ ಮಕ್ಕಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ. ವಸತಿ ಶಾಲೆಗೆ ಬಂದಂತಹ ದವಸ ಧಾನ್ಯಗಳು ಮಕ್ಕಳಿಗಾಗಿಯೇ ಮೀಸಲಿಡಿ ಹೊರತು ಎಲ್ಲಿಯಾದರೂನ್ಯೂನತೆ ಕಂಡುಬಂದಲ್ಲಿ ಶಾಲೆಯ ಮುಖ್ಯಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಆರ್ ವಿ ದೇಶಪಾಂಡೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ಹಳಿಯಾಳ ಕ್ಷೇತ್ರದ ವಸತಿ ಶಾಲೆಗಳ ಮುಖ್ಯಸ್ಥ ಹಾಗೂ ಅಧಿಕಾರಿಗಳ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ತಾಲ್ಲೂಕು ಪಂಚಾಯತಿ ಅಧಿಕಾರಿಗಳು ವಸತಿ ಶಾಲೆಗಳಿಗೆ ಹಠಾತ್ ಭೇಟಿ ನೀಡಿ ವಸತಿ ಶಾಲೆಗಳ ಪರಿಶೀಲನೆ ನಡೆಸಿ ಹಾಗೂ ಶಾಲಾ ಮುಖ್ಯಸ್ಥರು ನೀಡಿದ ವಸತಿ ಶಾಲೆಗಳ ವರದಿಯಂತೆ ಶಾಲೆಗಳಿಗೆ ಅವಶ್ಯಕತೆಗನುಗುಣವಾಗಿ ವಿದ್ಯಾರ್ಥಿಗಳಿಗೆ ನಿಯಮನುಸಾರವಾಗಿ ಆಹಾರ ಧಾನ್ಯ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದರು.
ತಾಲೂಕಿನ ಸಾಂಬ್ರಾಣಿಯ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಗತಿ ಪರಿಶೀಲನಾ ಕುರಿತು ಶಾಲಾ ಮುಖ್ಯಸ್ಥರು ವಿವರಿಸುತ್ತಿರುವಾಗ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ವಿಲಾಸ ರಾಜ ಪ್ರಸನ್ನ ಮಾತನಾಡಿ, ತಾವು ಸಾಂಬ್ರಾಣಿ ವಸತಿ ಶಾಲೆಯಲ್ಲಿ ಭೇಟಿ ನೀಡಿದಾಗ ವಸತಿ ಶಾಲೆಯಲ್ಲಿ ಶುಚಿತ್ವದ ಬಗ್ಗೆ ಬಹಳಷ್ಟು ದೂರಗಳು ಬಂದಿದ್ದು ಈ ಬಗ್ಗೆ ಶಾಲಾ ಮುಖ್ಯಸ್ಥರಿಗೆ ಸೂಚಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಾಗ ಶಾಸಕರು ಕೂಡಲೇ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರು.
ಕೆಲವು ಶಾಲೆಗಳಲ್ಲಿ ವಿದ್ಯಾಥಿ೯ಗಳ ಸಂಖ್ಯೆ ಕಡಿಮೆ ಇದ್ದಿದ್ದನ್ನು ಕಂಡು ಎಲ್ಲ ಶಾಲೆಗಳಲ್ಲಿ ಎಲ್ಲ ಮೂಲಭೂತ ಸೌಕಯ೯ಗಳನ್ನು ಕಲ್ಪಿಸಲಾಗಿದೆ ಆದರೂ ಕೂಡ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಇದ್ದರೆ ಬಗ್ಗೆ ಪರಿಶೀಲಿಸಿರಿ ಹಾಗೂ ವಿದ್ಯಾರ್ಥಿಗಳನ್ನು ಪುನಃ ವಸತಿ ಶಾಲೆಗೆ ಸೇರ್ಪಡೆಗೊಳ್ಳುವಂತೆ ಸೂಚಿಸಿರಿ ಎಂದು ಅಧಿಕಾರಿಗೆ ಸೂಚಿಸಿದರು.
ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯಾರ್ಥಿಗಳ ಪೀಠೋಪಕರಣ ಹಾಗೂ ವಸತಿಗಾಗಿ ಸೌಲಭ್ಯ ಇದ್ದಲ್ಲಿ ಕೂಡಲೇ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಿರಿ ಕುಡಿಯುವ ನೀರಿನ ಸಮಸ್ಯೆಯನ್ನು ಒಂದು ವಾರದೊಳಗಾಗಿ ನಿವಾರಿಸಲು ಸಹ ಅಧಿಕಾರಗಳಿಗೆ ಸೂಚಿಸಿದರು. ಇದೇ ಸಂದಭ೯ದಲ್ಲಿ ಕ್ಷೇತ್ರದ ಡಾ.ಬಿ.ಆರ್ ಅಂಬೇಡ್ಕರ ವಸತಿ ಶಾಲೆ ಮುಕ೯ವಾಡ ,ಮೂರಾಜಿ೯ ವಸತಿ ಶಾಲೆ ಬೆಳವಟಗಿ, ಅಟಲ್ ಬಿಹಾರಿ ವಸತಿ ಶಾಲೆ ಮದ್ನಳ್ಳಿ, ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆ ರಾಮನಗರ, ಮೊರಾಜಿ೯ ದೇಸಾಯಿ ವಸತಿ ಶಾಲೆ ಜೋಯಿಡಾ, ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ದಾಂಡೇಲಿ ಹಾಗೂ ಹಳಿಯಾಳ ಶಾಲೆಯ ಪರಿಶೀಲನೆ ಕುರಿತು ಪರಿಶೀಲಿಸಿದರು. ಎಲ್ಲ ವಸತಿ ಶಾಲೆಯ ಪ್ರಾಚಾಯ೯ರು ಪಂಚಾಯತ ಅಧಿಕಾರಿಗಳು ಉಪಸ್ಥಿತರಿದ್ದರು.