
ಶಿರಸಿ: ಉತ್ತರ ಕನ್ನಡದ ಅಘನಾಶಿನಿ ನದಿ ಪಾತ್ರದಲ್ಲಿ ಕಂಡುಬರುವ ಅಪರೂಪದ ‘ಅಪ್ಪೆಮಿಡಿ’ ಮಾವಿನ ವೈವಿಧ್ಯ ಸಂರಕ್ಷಣೆಗಾಗಿ ಈ ಪ್ರದೇಶವನ್ನು ‘ಜೀವವೈವಿಧ್ಯ ಪರಂಪರೆ ತಾಣ’ ಎಂದು ಘೋಷಿಸಬೇಕು ಎಂದು ಪರಿಸರ ತಜ್ಞರು ಮತ್ತು ಪರಿಸರ ಪ್ರೇಮಿಗಳು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
30 ಕಿ.ಮೀ ಉದ್ದದ ನದಿದಂಡೆಯಲ್ಲಿನ ಅಪ್ಪೆಮಿಡಿ ವೈವಿಧ್ಯದ ರಕ್ಷಣೆ ಇದರ ಉದ್ದೇಶ. ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಅಶೀಸರ ಹಾಗೂ ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ ಈ ಮನವಿ ಸಲ್ಲಿಸಿದ್ದಾರೆ.
‘ಜೈವಿಕ ವೈವಿಧ್ಯತೆ ಕಾಯ್ದೆ 2002ರ ಅನುಬಂಧ 37ರಡಿ ಈ ವಿಶಿಷ್ಟ ಆನುವಂಶಿಕ ಭಂಡಾರವನ್ನು ರಕ್ಷಿಸಬೇಕು‘ ಹಕ್ಕೊತ್ತಾಯ ಮಂಡಿಸಿದ್ದಾರೆ. ‘ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕು ವ್ಯಾಪ್ತಿಯ ಸರಕುಳಿಯಿಂದ ಉಂಚಳ್ಳಿ ಜಲಪಾತದವರೆಗಿನ ನದಿ ದಂಡೆಯ ಎರಡೂ ಬದಿಯ 100 ಮೀಟರ್ ವ್ಯಾಪ್ತಿಯನ್ನು ಈ ಸಂರಕ್ಷಿತ ವಲಯದಲ್ಲಿ ಸೇರಿಸಬೇಕು’ ಎಂದು ಕೋರಿದ್ದಾರೆ.
‘ಅಘನಾಶಿನಿ ಯಾವ ಅಣೆಕಟ್ಟುಗಳಿಲ್ಲದ ಮುಕ್ತ ಹರಿವಿನ ನದಿ. ಇಲ್ಲಿನ ವಿಶಿಷ್ಟ ಪರಿಸರ ವ್ಯವಸ್ಥೆಯಲ್ಲಿ ಅನಂತ ಭಟ್ಟನ ಅಪ್ಪೆ, ಜೀರಿಗೆ ಮಿಡಿ, ಕಂಚಪ್ಪೆ ಮತ್ತು ಗಿಳಿಸುಂಡಿಯಂಥ ನೂರಾರು ಅಪರೂಪದ ಅಪ್ಪೆಮಿಡಿ ತಳಿಗಳಿವೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, 10 ಕಿ.ಮೀ. ವ್ಯಾಪ್ತಿಯಲ್ಲಿ ವಿಶಿಷ್ಟ ಪರಿಮಳ ಹಾಗೂ ರುಚಿಯ ಸಾವಿರಕ್ಕೂ ಹೆಚ್ಚು ಮರಗಳಿವೆ’ ಎಂದು ಅನಂತ ಅಶೀಸರ ಉಲ್ಲೇಖಿಸಿದ್ದಾರೆ.
‘2023ರಲ್ಲಿ ಅಘನಾಶಿನಿ ಮುಖಜ ಭೂಮಿಗೆ ‘ರಾಮ್‌ಸರ್ ತಾಣ’ದ ಮಾನ್ಯತೆ ಸಿಕ್ಕ ಬೆನ್ನಲ್ಲೇ, ನದಿ ಮೇಲ್ಭಾಗದ ಜೈವಿಕ ಸಂಪತ್ತು ಉಳಿಸುವ ತುರ್ತು ಅಗತ್ಯ ಕುರಿತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಇಲ್ಲಿ ಅತಿಕ್ರಮಣ, ವಾಣಿಜ್ಯ ಏಕದಳ ಕೃಷಿ, ಹವಾಮಾನ ಬದಲಾವಣೆಯಂಥ ಬೆದರಿಕೆ ಇದೆ’ ಎಂದಿದ್ದಾರೆ.
ಈ ವ್ಯಾಪ್ತಿಯ ಅಣಲೆಬೈಲ್, ನೆಗ್ಗು, ಕಾನಸೂರು, ಹಸರಗೋಡು, ಹಾರ್ಸಿಕಟ್ಟಾ, ಸೋವಿನಕೊಪ್ಪ ಮತ್ತು ಹೆಗ್ಗರಣಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಜೀನ್ ಮ್ಯಾಪಿಂಗ್, ಪಾರಂಪರಿಕ ಹಬ್ಬಗಳು ಮತ್ತು ಸಂಶೋಧನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ.
‘ಜೀವವೈವಿಧ್ಯ ಪರಂಪರೆ ತಾಣ’ ಘೋಷಣೆ ಬೇಡಿಕೆಗೆ ಮಾನ್ಯತೆ ಸಿಕ್ಕರೆ, ಸ್ಥಳೀಯ ಕೃಷಿಕರ ಹಕ್ಕುಗಳಿಗೆ ಆದ್ಯತೆ ಸಿಗುತ್ತದೆ. ಅಲ್ಲದೇ, ಪಶ್ಚಿಮ ಘಟ್ಟಗಳ ಈ ಅಪರೂಪದ ಜೈವಿಕ ಹಾಗೂ ಸಾಂಸ್ಕೃತಿಕ ಪರಂಪರೆಯು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರವಾಗಲಿದೆ’ ಎಂದು ಬಾಲಚಂದ್ರ ಸಾಯಿಮನೆ ಅವರು ಅಭಿಪ್ರಾಯಪಟ್ಟರು.
ಅಪ್ಪೆಮಿಡಿಗಳು ಕೇವಲ ಸಾಂಪ್ರದಾಯಿಕ ಉಪ್ಪಿನಕಾಯಿ ತಯಾರಿಕೆಗೆ ಸೀಮಿತವಾಗಿಲ್ಲ. ಇವು ಹವಾಮಾನ ವೈಪರೀತ್ಯ ತಡೆಯಬಲ್ಲ ಮತ್ತು ಕೀಟ ನಿರೋಧಕ ಶಕ್ತಿಯುಳ್ಳ ಅಮೂಲ್ಯ ಆನುವಂಶಿಕ ಸಂಪನ್ಮೂಲಗಳಾಗಿವೆ.ಅನಂತ ಅಶೀಸರ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.