ವರಮಹಾಲಕ್ಷ್ಮೀ ವೃತದ ಅಂಗವಾಗಿ ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಪಾರ ಜನರು ಸೇರಿದ್ದರು
ಭಟ್ಕಳ: ತಾಲ್ಲೂಕಿನ ಅಳ್ವೇಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವೃತದ ನಿಮಿತ್ತ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಮಹಿಳೆಯರು ದೇವಿಗೆ ಉಡಿ ಸಮರ್ಪಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಈ ಕಾರ್ಯಕ್ರಮದ ಉಸ್ತವಾರಿ ವಹಿಸಿಕೊಂಡಿತ್ತು. ಅಳ್ವೇಕೋಡಿಯಲ್ಲಿ ಶುಕ್ರವಾರ ಜಾತ್ರೆಯ ವಾತಾವರಣವೇ ನಿರ್ಮಾಣವಾಗಿತ್ತು.
ದೇವಿಯ ದರ್ಶನ ಪಡೆಯಲು ಕಿಲೋ ಮಿಟರ್‌ಗಟ್ಟಲೆ ಉದ್ದದ ಸರತಿ ಸಾಲು ನಿರ್ಮಾಣವಾಗಿತ್ತು. ವರಮಹಾಲಕ್ಷ್ಮೀ ವೃತದ ಸಂದರ್ಭದಲ್ಲಿ ಅಳ್ವೇಕೋಡಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ನಾರಾಯಣ ದೈಮನೆ, ಮಾರಿ ಜಾತ್ರಾ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಸೇರಿದಂತೆ ಆಡಳಿತ ಸಮಿತಿ ಸದಸ್ಯರು ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದ್ದರು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಶಿರಾಲಿಯಿಂದ ಅಳ್ವೇಕೋಡಿಗೆ ಬರಲು ದೇವಸ್ಥಾನದ ಆಡಳಿತ ಮಂಡಳಿ ಉಚಿತ ವಾಹನದ ವ್ಯವಸ್ಥೆ ಕಲ್ಪಸಿತ್ತು. ಭಕ್ತರು ಈ ಸೇವೆಯ ಅನುಕೂಲ ಪಡೆದರು. ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.