ADVERTISEMENT

ಭಟ್ಕಳ: ತುಕ್ಕು ಹಿಡಿಯುತ್ತಿದೆ ‘108’ ವಾಹನ

ಮುರುಡೇಶ್ವರದಲ್ಲಿ ಬದಲಿ ವ್ಯವಸ್ಥೆಯೂ ಇಲ್ಲದೇ ರೋಗಿಗಳ ಪರದಾಟ

ಮೋಹನ ನಾಯ್ಕ
Published 12 ಆಗಸ್ಟ್ 2022, 21:30 IST
Last Updated 12 ಆಗಸ್ಟ್ 2022, 21:30 IST
ತುಕ್ಕು ಹಿಡಿದ ಸ್ಥಿತಿಯಲ್ಲಿರುವ ಆಂಬುಲೆನ್ಸ್ ಈಗ ಈ ಸ್ಥಿತಿಗೆ ತಲುಪಿದೆ
ತುಕ್ಕು ಹಿಡಿದ ಸ್ಥಿತಿಯಲ್ಲಿರುವ ಆಂಬುಲೆನ್ಸ್ ಈಗ ಈ ಸ್ಥಿತಿಗೆ ತಲುಪಿದೆ   

ಭಟ್ಕಳ: ತಾಲ್ಲೂಕಿನ ಮುರುಡೇಶ್ವರ ಭಾಗದ ಜನರಿಗಾಗಿ ಕಾದಿರಿಸಿದ ‘108’ ಆಂಬುಲೆನ್ಸ್, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತುಕ್ಕು ಹಿಡಿಯುತ್ತಿದೆ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಬೇರೆ ಆಸ್ಪತ್ರೆಗೆ ತೆರಳಲು ಖಾಸಗಿ ವಾಹನಕ್ಕೆ ದುಪ್ಪಟ್ಟು ಬೆಲೆ ತೆರಬೇಕಾಗುತ್ತಿದೆ.

ಮುರುಡೇಶ್ವರ ಮಾವಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಆರು ಗ್ರಾಮ ಪಂಚಾಯಿತಿಗಳಿವೆ. ಈ ವ್ಯಾಪ್ತಿಯ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಚಿಕಿತ್ಸೆಗಾಗಿ ಭಟ್ಕಳಕ್ಕೆ ಧಾವಿಸಬೇಕಾಗುತ್ತದೆ. ಮುರುಡೇಶ್ವರ ವಿಶ್ವಪ್ರಸಿದ್ದ ಪ್ರವಾಸಿ ತಾಣ. ನಿತ್ಯ ಇಲ್ಲಿ ಸಾವಿರಾರು ಪ್ರವಾಸಿಗರೂ ಪ್ರತಿನಿತ್ಯ ಭೇಟಿ ನೀಡುತ್ತಾರೆ. ಸಮುದ್ರದ ಕಡಲಿಗೆ ಇಳಿಯುವ ಪ್ರವಾಸಿಗರು ಅಸ್ವಸ್ಥರಾದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಭಟ್ಕಳಕ್ಕೆ
ಕರೆತರಲು ‘108’ ವಾಹನವಿಲ್ಲ.

ಬದಲಿ ವಾಹನ ಇಲ್ಲ: ಈ ಮೊದಲು ಮುರುಡೇಶ್ವರದಲ್ಲಿ ಒಂದು ‘108’ ಆಂಬುಲೆನ್ಸ್ ವಾಹನ ಸೇವೆಯಲ್ಲಿತ್ತು. ಅದು ಶಿಥಿಲಾವಸ್ಥೆ ತಲುಪಿದ ಕಾರಣ ಆರು ತಿಂಗಳ ಹಿಂದೆ ಗುಜರಿಗೆ ಹಾಕಲಾಗಿತ್ತು. ಕಳೆದ ಜನವರಿಯಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಹೊಸ ‘108’ ಆಂಬುಲೆನ್ಸ್ ವಾಹನವನ್ನು ಕೇಂದ್ರ ಸರ್ಕಾರ ನೀಡಿತ್ತು. ಈ ಹೊಸ ವಾಹನ ಭಟ್ಕಳಕ್ಕೆ ಬಂದ
ಮೇಲೆ ಹಳೆ ವಾಹನವನ್ನು ಮುರುಡೇಶ್ವರಕ್ಕೆ ನೀಡಲು ನಿರ್ಧರಿಸಲಾಗಿತ್ತು.

ADVERTISEMENT

ಈ ನಿಟ್ಟಿನಲ್ಲಿ ಅಧಿಕಾರಿಗಳು ಇದಕ್ಕೆ ಕ್ರಮವಹಿಸದ ಕಾರಣ ಈ ವಾಹನ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಿಂತು ಎಂಟು ತಿಂಗಳು ಕಳೆಯಿತು. ಮಳೆಯಿಂದಾಗಿ ವಾಹನದ ಒಂದೊಂದು ಭಾಗವೂ ತುಕ್ಕು ಹಿಡಿಯುತ್ತಿದೆ.

‘ತಾಲ್ಲೂಕಿನಲ್ಲಿ ಈಗ ಒಂದು ಮಾತ್ರ ‘108’ ಕಾರ್ಯ ನಿರ್ವಹಿಸುತ್ತಿದೆ. ಈಗಿರುವ ವಾಹನ ರೋಗಿಯನ್ನು ತುರ್ತು ಸಂದರ್ಭದಲ್ಲಿ ಕುಂದಾಪುರಕ್ಕೆ ಅಥವಾ ಬೇರೆ ಆಸ್ಪತ್ರೆಗಳಿಗೆ ತೆದೆದುಕೊಂಡು ಹೋದರೆ, ಇಲ್ಲಿ ಬದಲಿ ವಾಹನವಿಲ್ಲ. ಅಗತ್ಯವಿದ್ದರೆ ಜನ ಹಣ ಕೊಟ್ಟು ಖಾಸಗಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆ ಇದೆ’ ಎನ್ನುತ್ತಾರೆ ಮುರುಡೇಶ್ವರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ನಾಯ್ಕ.

‘ವಾಹನ ವ್ಯವಸ್ಥೆ ಮಾಡಲಾಗುವುದು’:

‘ಆಂಬುಲೆನ್ಸ್‌ಗೆ ಈಗಿರುವ ಗುತ್ತಿಗೆದಾರನ ಕಾರ್ಯವೈಖರಿಯಿಂದ ರಾಜ್ಯದ ಹಲವು ಕಡೆ ಈ ರೀತಿ ಸಮಸ್ಯೆ ಆಗಿದೆ. ಇನ್ನೆರಡು ತಿಂಗಳಿನಲ್ಲಿ ಮರುಟೆಂಡರ್ ಕರೆದು ಸರಿಪಡಿಸಲಾಗುವುದು. ಹಾಲಿ ಇರುವ ವಾಹನವನ್ನು ಪರಿಶೀಲಿಸಿ ಮುರುಡೇಶ್ವರದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರಿನ ಇ.ಎಂ.ಆರ್.ಐ ಉಪ ನಿರ್ದೇಶಕ ಡಾ.ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.