ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದರು
ಶಿರಸಿ: ಶೀಘ್ರದಲ್ಲೇ ಸಂಸದ ಅನಂತಕುಮಾರ ಹೆಗಡೆ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಜತೆ ಅವರ ಮಾರ್ಗದರ್ಶನದಲ್ಲೇ ಚುನಾವಣಾ ಕಾರ್ಯತಂತ್ರ ರೂಪಿಸಲಾಗುವುದು ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಮಂಗಳವಾರ ಬಿಡ್ಕಿಬಯಲಿನ ಜಾತ್ರೆ ಗದ್ದುಗೆಯಲ್ಲಿ ಮಾರಿಕಾಂಬೆಯ ದರ್ಶನ ಪಡೆದು ಮಾಧ್ಯಮದವರ ಜತೆ ಮಾತನಾಡಿ, ಸಂಸದ ಅನಂತಕುಮಾರ ಹೆಗಡೆ ಹಾಗೂ ನಾನು ಅಣ್ಣ–ತಮ್ಮ ಇದ್ದಂತೆ. ಅವರ ಅಪಾರವಾದ ಆಡಳಿತ ಅನುಭವ ನನಗೆ ಚುನಾವಣೆಯಲ್ಲಿ ಅನುಕೂಲ ಆಗಲಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಅವರನ್ನು ಭೇಟಿ ಮಾಡಿ ಅವರ ಮಾರ್ಗದರ್ಶನ, ಸಲಹೆ-ಸೂಚನೆ ಪಡೆಯುತ್ತೇನೆ ಎಂದರು.
‘ಅನಂತಕುಮಾರ ಹೆಗಡೆ ನಿರಂತರವಾಗಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸಿ, ಒಮ್ಮೆ ಕೇಂದ್ರ ಸಚಿವರಾಗಿ ಕೆಲಸ ಮಾಡಿ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಸೆ ಸಾಕಷ್ಟಿದೆ. ಹೆಗಡೆ ಈ ಕ್ಷೇತ್ರದ ಜೊತೆ ರಾಜ್ಯದ 28 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಿಶ್ಚಿತ ಕೊಡುಗೆ ನೀಡಲಿದ್ದಾರೆ’ ಎಂದರು.
‘ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುವ ಚುನಾವಣೆ ಇದಾಗಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ತಮ್ಮ ಕೆಲಸ ಆರಂಭಿಸಿದ್ದಾರೆ. ನಾನು ಸಹ ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ಈ ವರ್ಷ ದಾಖಲೆಯ ಗೆಲುವಿಗೆ ಜನರು ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.