
ಕಾರವಾರ: ಎರಡು ವರ್ಷಗಳ ಬಳಿಕ ಲೋಕಸಭೆಯ ಮಾಜಿ ಸದಸ್ಯ ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣದತ್ತ ಮುಖ ಮಾಡಲಿದ್ದಾರೆ ಎಂಬ ಚರ್ಚೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿದೆ.
ಮಾರ್ಚ್ 8ರಂದು ಭಟ್ಕಳ ನಗರದಲ್ಲಿ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲು ಒಪ್ಪಿದ್ದಾರೆ. ಇದು ಈ ಚರ್ಚೆಗೆ ನಾಂದಿ ಹಾಡಿದೆ. 90ರ ದಶಕದಲ್ಲಿ ಭಟ್ಕಳದಲ್ಲಿ ನಡೆದಿದ್ದ ಕೋಮು ಸಂಘರ್ಷದ ವೇಳೆ ಪ್ರಚೋದನಕಾರಿ ಭಾಷಣಕ್ಕೆ ಅವರು ಹೆಸರಾಗಿದ್ದರು.
6 ಬಾರಿ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅನಂತಕುಮಾರ 2018ರಲ್ಲಿ ಕೆಲ ಅವಧಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಸಂವಿಧಾನದ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆ ವಿವಾದ ಆಗಿದ್ದರಿಂದ, ಸಚಿವ ಸ್ಥಾನ ಅವರಿಗೆ ಕೈತಪ್ಪಿತ್ತು.
2024ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮತ್ತೆ ಸಕ್ರಿಯರಾಗಿದ್ದ ಅವರು ಟಿಕೆಟ್ ಕೈತಪ್ಪಿದ್ದರಿಂದ ಪಕ್ಷದ ಚಟುವಟಿಕೆ, ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದರು.
ಟಿಕೆಟ್ ಕೈತಪ್ಪುತ್ತಿದ್ದಂತೆ ಫೇಸ್‍ಬುಕ್‍ನಲ್ಲಿ, ‘ಮೂರು ದಶಕಗಳಿಂದ ಹಿಂದವೀ ಹಿತದಲ್ಲಿ ಸೇವೆ ಸಲ್ಲಿಸುವ ಸುಯೋಗ್ಯ ಬದುಕಿನಲ್ಲಿ ನನಗೊಂದು ಗುರುತು ನೀಡಿದೆ. ನಿಜಕ್ಕೂ ಅಷ್ಟೇ ಸಾಕು! ಈ ಸಮಾಜ ದೇವತೆಯ ಪದತಲದಲ್ಲಿ ಹೂವಾಗುವ ಸೌಭಾಗ್ಯ ಅದೆಷ್ಟು ಜನರಿಗೆ ತಾನೇ ಸಿಕ್ಕೀತು?’ ಎಂದು ಬರೆದುಕೊಂಡಿದ್ದರು.
ಆದರೆ, ಇದೀಗ ಪುನಃ ಹಿಂದೂ ಸಮ್ಮೇಳನ ಸಮಿತಿಯ ಭಟ್ಕಳ ಘಟಕದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
‘ಹಿಂದುತ್ವದ ವಿಚಾರಧಾರೆಯನ್ನು ಪ್ರಖರವಾಗಿ ಮಂಡಿಸುವವರರಲ್ಲಿ ಅನಂತಕುಮಾರ ಹೆಗಡೆ ಒಬ್ಬರು. ಹೀಗಾಗಿ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ’ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದರು.
‘ಸಕ್ರಿಯ ರಾಜಕೀಯಕ್ಕೆ ಅನಂತಕುಮಾರ ಮರಳುವ ಬಗ್ಗೆ ಚರ್ಚೆ ನಡೆದಿರುವುದು ಗೊತ್ತಿಲ್ಲ. ಉದ್ಯಮ ಕ್ಷೇತ್ರದಲ್ಲಿ ಅವರು ಹೆಚ್ಚು ತೊಡಗಿಕೊಂಡಿದ್ದಾರೆ’ ಎಂದು ಅನಂತಕುಮಾರ ಆಪ್ತರೊಬ್ಬರು ಹೇಳಿದರು.
‘ಅನಂತಕುಮಾರ ಹೆಗಡೆ ಬಿಜೆಪಿಯಲ್ಲೇ ಇದ್ದಾರೆ. ಅವರು ನಮ್ಮಿಂದ ದೂರವಾಗಿಲ್ಲ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.