
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಚಿಕ್ಕಮಾವಳ್ಳಿ ಮತ್ತು ಮಾವಳ್ಳಿಯ ಸುತ್ತಮುತ್ತಲ ಬೆಟ್ಟದಲ್ಲಿ ಜೈನ ಹಾಗೂ ಶೈವ ಶಿಲಾ ಶಾಸನಗಳು, ವೀರಗಲ್ಲುಗಳು ಪತ್ತೆಯಾಗಿವೆ.
‘ವಿಜಯದ ಸಂಕೇತವಾಗಿ ಸಾವಿರಾರು ವರ್ಷಗಳ ಹಿಂದೆ ವೀರಗಲ್ಲುಗಳನ್ನು ಇಲ್ಲಿ ನೆಡಲಾಗಿದೆ. ಹೆಚ್ಚಿನವು ತ್ರಿಭುವನ ಮಲ್ಲ ಎಂಬ ಬಿರುದನ್ನು ಹೊಂದಿದ್ದ 5ನೇ ವಿಕ್ರಮಾದಿತ್ಯನ ಕಾಲದವು. ಯುದ್ಧದಲ್ಲಿ ವೀರಮರಣವನ್ನಪ್ಪಿದ ಸೈನಿಕರಾದ ಬೊಮ್ಮಣ್ಣ ನಾಯ್ಕ, ಬಲ್ಲಾಳದೇವ, ಯಲ್ಲಪ್ಪ ನಾಯ್ಕ, ಬಲದೇವ ನಾಯ್ಕ, ತಮ್ಮಣ್ಣ ನಾಯ್ಕ, ಸಣ್ಣು ನಾಯ್ಕ ಮತ್ತಿತರ ಹೆಸರುಗಳು ಮತ್ತು ಅವರ ಸಾಧನೆ ಹೇಳುತ್ತ ಮೆರವಣಿಗೆ ಮಾಡಿದ ಬಗ್ಗೆ ಚಿತ್ರಗಳು ಶಿಲಾಶಾಸನದಲ್ಲಿವೆ. ವೀರಗಲ್ಲುಗಳು ಪಾಳುಬಿದ್ದ ಸ್ಥಿತಿಯಲ್ಲಿದ್ದು, ಹೆಚ್ಚಿನವು ತುಂಡಾಗಿವೆ’ ಎಂದು ಇತಿಹಾಸ ಸಂಶೋಧಕ ಮತ್ತು ಮೋಡಿಲಿಪಿ ತಜ್ಞ ಸಂಗಮೇಶ ಕಲ್ಯಾಣಿ ತಿಳಿಸಿದರು.
‘ಮಾವಳ್ಳಿಯ ಕಾಡಿನ ನಡುವೆ ಭುವನೇಶ್ವರಿ ದೇವಸ್ಥಾನದ ಅವಶೇಷಗಳು ಸಿಕ್ಕಿವೆ. ಕರ್ಣಮುಚ್ಚುಗೆಯ ಶಿಲೆ, ನಂದಿ ವಿಗ್ರಹಗಳು ವಿರೂಪ ಸ್ಥಿತಿಯಲ್ಲಿವೆ. ಪುಷ್ಕರಣಿಯ ಕುರುಹುಗಳಿವೆ. ಅಗಸ್ತ್ಯ ಮುನಿ ಮತ್ತು ಅವರ ಶಿಷ್ಯ ವಾಲಖಿಲ್ಯ ಮುನಿಗಳು ಇಲ್ಲಿ ಭುವನೇಶ್ವರಿಯ ದೇವಾಲಯ ಸ್ಥಾಪಿಸಿದ್ದರು. ತಾಯಿ ಭುವನೇಶ್ವರಿ ಈ ಭಾಗದ ಮೂಲ ದೇವರು ಎಂಬ ಬಗ್ಗೆ ದಾಖಲೆಗಳು ತಿಳಿಸುತ್ತವೆ. ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರತ್ಯೇಕ ದೇವಸ್ಥಾನ ನಿರ್ಮಿಸುವ ಆಲೋಚನೆಯಿದೆ’ ಎಂದು ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ಗುರುಪಾದಯ್ಯ ನಂದೊಳ್ಳಿಮಠ ತಿಳಿಸಿದರು.
ಭಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಸ್ಥಳೀಯರಾದ ಸಂತೋಷ ಗುಡಿಗಾರ, ನಂದೀಶ ಮರಾಠಿ, ಶೇಷಗಿರಿ ಹೆಗಡೆ, ಎಂ.ಎಸ್. ಹೆಗಡೆ, ಗಣಪತಿ ಹೆಗಡೆ, ನಾಗರಾಜ ಹೆಗಡೆ, ಸಿದ್ದಾರ್ಥ ನಂದೊಳ್ಳಿಮಠ, ಗಣಪತಿ ಮರಾಠಿ, ದೀಪಕ ನಾಯ್ಕ, ಅಕ್ಷಯ ಮರಾಠಿ, ನಾಗರಾಜ ನಾಯ್ಕ, ವಿಘ್ನೇಶ್ವರ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.