ಅಂಕೋಲಾ: ತಾಲ್ಲೂಕಿನ ಬೇಲೆಕೇರಿ ಬಂದರಿನಲ್ಲಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿತ್ತು. ಇದರ ಬೆನ್ನಲ್ಲೇ ಶುಕ್ರವಾರ ರಾತ್ರಿ ಮತ್ತೊಂದು ಮೀನುಗಾರಿಕಾ ದೋಣಿ ಮುಳುಗಿದ್ದು, ಇದು ಸ್ಥಳೀಯ ಮೀನುಗಾರರಲ್ಲಿ ಆತಂಕ ಮೂಡಿಸಿದೆ.
ದುರ್ಗಾ ಪ್ರಸಾದ್ ಎಂಬ ಪರ್ಷಿಯನ್ ದೋಣಿ ಜಟ್ಟಿ ಬಳಿ ಬಂಡೆಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಪ್ರಾಥಮಿಕ ಮಾಹಿತಿಯ ಪ್ರಕಾರ ವರದಿಯಾಗಿದೆ. ದೋಣಿ ಶ್ರೀಕಾಂತ್ ತಾಂಡೆಲ್ ಅವರಿಗೆ ಸೇರಿದ್ದು, ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಎಂದು ಅಂದಾಜಿಸಲಾಗಿದೆ.
ಬಂದರಿನಲ್ಲಿ ಹೂಳೆತ್ತುವ ಕಾರ್ಯದ ಕೊರತೆ ಮತ್ತು ಬ್ರೇಕ್‌ವಾಟರ್ ಇಲ್ಲದಿರುವುದು ಈ ಪ್ರದೇಶದ ದೋಣಿ ಮಾಲೀಕರಿಗೆ ತೀವ್ರ ಸವಾಲುಗಳನ್ನು ಒಡ್ಡುತ್ತಿದೆ. ಸಮುದ್ರದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಈ ಪ್ರದೇಶದಲ್ಲಿ ದೋಣಿಗಳು ಮುಳುಗುವ ಘಟನೆಗಳು ಪುನರಾವರ್ತಿತವಾಗುತ್ತಿವೆ ಎಂದು ದೋಣಿ ಮಾಲೀಕರು ಆರೋಪಿಸಿದ್ದಾರೆ.
ಪ್ರತಿ ವರ್ಷ ನಾವು ನಷ್ಟ ಅನುಭವಿಸುತ್ತಲೇ ಇದ್ದೇವೆ. ಬಂದರು ಸುರಕ್ಷಿತವಾಗಿಲ್ಲ ಮತ್ತು ಸರ್ಕಾರವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯ ಮೀನುಗಾರರು ತಮ್ಮ ಹತಾಶೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.