
ಗೋಕರ್ಣದ ಕುಡ್ಲೆ ಬೀಚಿನಲ್ಲಿ 50 ವರ್ಷದಿಂದ ಗೋಕರ್ಣಕ್ಕೆ ಬರುತ್ತಿದ್ದ ಇಂಗ್ಲೆಂಡ್ ಮಹಿಳೆ ಅಂತೋನಿಯಾ ಚೆಟ್ವಿಂಡ್ ಅವರನ್ನು ಸನ್ಮಾನಿಸುತ್ತಿರುವ ಕುಡ್ಲೆ ಬೀಚಿನ ರೆಸಾರ್ಟ್ ಮಾಲೀಕ ಪರಮೆಶ್ವರ ಶಾಸ್ತ್ರಿ.
ಗೋಕರ್ಣ: ‘ಗೋಕರ್ಣ ಪವಿತ್ರವಾದ ಆಧ್ಯಾತ್ಮ್ಮಿಕ ಕ್ಷೇತ್ರ. ಇಲ್ಲಿಯ ಪ್ರಾಕೃತಿಕ ಸೌಂದರ್ಯ, ಸಂಪ್ರದಾಯಬದ್ಧ ಆಚರಣೆಗಳು ಪ್ರತಿ ವರ್ಷವೂ ಬರುವಂತೆ ನನಗೆ ಪೇರೇಪಿಸುತ್ತಿದೆ. ಇದು ನನ್ನ ಮತ್ತೊಂದು ತಾಯ್ನಾಡು’ ಎಂದು ನಿರಂತರ 50 ವರ್ಷದಿಂದ ಗೋಕರ್ಣಕ್ಕೆ ಬರುತ್ತಿದ್ದ ಇಂಗ್ಲೆಂಡ್ ಮಹಿಳೆ ಅಂತೋನಿಯಾ ಚೆಟ್ವಿಂಡ್ ಭಾವುಕರಾಗಿ ಹೇಳಿದರು.
ಇಲ್ಲಿನ ಕುಡ್ಲೆ ಕಡಲತೀರದಲ್ಲ ಗುರುವಾರ ಹಿತೈಷಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೆಸಾರ್ಟ್ ಮಾಲೀಕ ಪರಮೇಶ್ವರ ಶಾಸ್ತ್ರಿ ಈ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು.
‘ನನಗೆ ಈಗ 91 ವಯಸ್ಸು. 1976ರ ಮಹಾಶಿವರಾತ್ರಿಯಲ್ಲಿ ಮೊದಲ ಬಾರಿಗೆ ಗೋಕರ್ಣಕ್ಕೆ ಬಂದೆ. ನನ್ನ ಜೊತೆ 5 ಜನ ವಿದೇಶಿ ಸಂಗೀತಗಾರರೂ ಬಂದಿದ್ದರು. ಶಿವರಾತ್ರಿಯಲ್ಲಿ ಮಹಾಬಲೇಶ್ವರ ದೇವಸ್ಥಾನದಲ್ಲಿ ಪ್ರವೇಶಿಸಿ ಆತ್ಮಲಿಂಗದ ದರ್ಶನವನ್ನೂ ಪಡೆದಿದ್ದೆ. ಆಗ ವಿದೇಶಿಯರಿಗೆ ವರ್ಷಕ್ಕೊಮ್ಮೆ ಮಹಾಶಿವರಾತ್ರಿಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ದೇವರ ದರ್ಶನಕ್ಕೆ ಅವಕಾಶವಿತ್ತು. ಅದು ನನ್ನ ಜೀವನದ ದೊಡ್ಡ ಭಾಗ್ಯ’ ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
‘ಇಲ್ಲಿ ಧಾರ್ಮಿಕತೆ ಹಾಗೂ ಆಧುನಿಕತೆ ಎರಡೂ ಕೂಡಿಕೊಂಡಿರುವುದರಿಂದ ಆಕರ್ಷಣೆಗೆ ಒಳಪಡಲು ಕಾರಣವಾಯಿತು. ನೈಸರ್ಗಿಕವಾಗಿ ಬರುವ ರಾಮತೀರ್ಥದಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದು ಪ್ರತಿ ನಿತ್ಯದ ಕಾಯಕವಾಗಿಸಿಕೊಂಡಿದ್ದೆ. ಆದರೆ ಈಗ ಎಲ್ಲವೂ ಬದಲಾವಣೆಯಾಗಿದೆ. ಆದರೂ ಗೋಕರ್ಣ ತುಂಬಾ ಮೆಚ್ಚಿನ ಪ್ರದೇಶ’ ಎಂದರು.
ಸುಮಾರು 50 ರಷ್ಟು ವಿದೇಶಿಯರೂ ಸೇರಿದಂತೆ ಸ್ಥಳೀಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ರಾಮಚಂದ್ರ ನಿರ್ವಾಣೇಶ್ವರ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.