ಕಾರವಾರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ತಡೆಯುವುದು ಸೇರಿದಂತೆ ಮಾನವ ಹಕ್ಕು ಉಲ್ಲಂಘನೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಬರೆಯಲಾದ ಪತ್ರವನ್ನು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಸಲ್ಲಿಸಲಾಯಿತು.
‘ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ, ಮುಖಂಡರಿಗೆ ಪೊಲೀಸರು ತಡರಾತ್ರಿ ಕರೆ ಮಾಡಿ ವಿಚಾರಣೆಗೆ ಕರೆಯುವುದು, ಮನೆ ಬಾಗಿಲಿಗೆ ಬಂದು ವಿಚಾರಣೆ ನಡೆಸುವ ಕೆಲಸ ಮಾಡುತ್ತಿದ್ದಾರೆ. ನೋಟಿಸ್ ನೀಡದೆ ಠಾಣೆಗೆ ವಿಚಾರಣೆಗಾಗಿ ಹಾಜರಾಗುವಂತೆ ಒತ್ತಡ ಹೇರುವ ಕೆಲಸ ನಡೆಯುತ್ತಿದೆ’ ಎಂದು ದೂರಲಾಗಿದೆ.
‘ದಶಕಗಳಿಂದ ಸಂಘಟನೆಗಳ ಚಟುವಟಿಕೆಗಳಿಂದ ದೂರ ಇದ್ದವರ ಮನೆ ಬಾಗಿಲುಗೂ ತೆರಳಿ ಅವರ ವಿಚಾರಣೆ ನಡೆಸಿ, ಭಾವಚಿತ್ರ ತೆಗೆದು ಅಪಮಾನಿಸುವ ಕೆಲಸ ಪೊಲೀಸರಿಂದ ನಡೆದಿದೆ. ಕೇವಲ ಹಿಂದೂ ಸಮುದಾಯದ ನಾಯಕರನ್ನು ಗುರಿಯಾಗಿಸಿ ಗಡಿಪಾರು ಮಾಡುವ ಕೆಲಸ ನಡೆದಿದೆ’ ಎಂದೂ ಆರೋಪಿಸಿದ್ದಾರೆ.
‘ಈಚೆಗೆ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೆ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು. ಪ್ರಚೋದನಕಾರಿ ಭಾಷಣ ಮಾಡುತ್ತಿರುವ ಎಸ್‌ಡಿಪಿಐ ಮುಖಂಡರಾದ ರಿಯಾಜ್ ಫರಂಗಿಪೇಟೆ, ರಿಯಾಜ್ ಕಡಬ, ಜಮಾಲ್ ಜೋಕಟ್ಟೆ, ಇತರರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖ ಗುರುಪ್ರಸಾದ ಗೌಡ, ಸೂರಜ್ ಬೇಳೂರಕರ, ಅಮಿತ್ ಮಾಳ್ಸೇಕರ್, ಶರದ್ ಬಾಂದೇಕರ್, ಸುನೀಲ ತಾಮ್ಸೆ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.