
ಶಿರಸಿ: ಅಡಿಕೆ ಎಲೆಚುಕ್ಕಿ ಸಮಗ್ರ ನಿರ್ವಹಣೆ ಸಂಬಂಧ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಎರಡೂವರೆ ವರ್ಷಗಳ ಹಿಂದೆ ಸಲ್ಲಿಕೆಯಾಗಿದ್ದ ‘ಎಲೆಚುಕ್ಕಿ ರೋಗ ನಿರ್ವಹಣಾ ಪ್ಯಾಕೇಜ್’ ಪ್ರಸ್ತಾವವು ತಾಂತ್ರಿಕ ನಿಯಮಾವಳಿಗಳ ಸುಳಿಗೆ ಸಿಲುಕಿ ಅಪ್ರಯೋಜಕವಾಗಿದೆ.
ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ 2023-24ನೇ ಸಾಲಿನಲ್ಲಿ ಸುಮಾರು 53,977.04 ಹೆಕ್ಟೇರ್ ಪ್ರದೇಶ ಎಲೆಚುಕ್ಕಿ ರೋಗಕ್ಕೆ ತುತ್ತಾಗಿತ್ತು. ಈ ಪೈಕಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 8,604 ಹೆಕ್ಟೇರ್ ಪ್ರದೇಶದಲ್ಲಿ ರೋಗ ವ್ಯಾಪಿಸಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ತಜ್ಞರ ಸಮಿತಿಯು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ವೈಜ್ಞಾನಿಕ ಅಧ್ಯಯನ ನಡೆಸಿತ್ತು. ರೋಗಗ್ರಸ್ತ ಸಸ್ಯಭಾಗಗಳ ವಿಲೇವಾರಿ, ರಾಸಾಯನಿಕ ಸಿಂಪಡಣೆ, ಮಣ್ಣಿನ ಪೋಷಕಾಂಶ ನಿರ್ವಹಣೆ, ಬಸಿಗಾಲುವೆಗಳ ನಿರ್ಮಾಣ ಮತ್ತು ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡದ ₹36 ಕೋಟಿ ಪಾಲು ಸೇರಿದಂತೆ ಒಟ್ಟು ₹225 ಕೋಟಿಗೂ ಅಧಿಕ ಮೊತ್ತದ ಬೃಹತ್ ಕ್ರಿಯಾಯೋಜನೆಯನ್ನು 2023ರ ಸೆಪ್ಟೆಂಬರ್‌ನಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಈ ವಿಶೇಷ ಪ್ಯಾಕೇಜ್‍ಅನ್ನು ಪ್ರತ್ಯೇಕವಾಗಿ ಜಾರಿಗೊಳಿಸುವ ಬದಲು ತೋಟಗಾರಿಕಾ ಸಮಗ್ರ ಅಭಿವೃದ್ಧಿ ಮಿಷನ್ (ಎಂಐಡಿಎಚ್) ಅಡಿಯಲ್ಲೇ ಅನುಷ್ಠಾನಗೊಳಿಸಬೇಕೆಂದು ಸರ್ಕಾರ ಆದೇಶಿಸಿರುವುದು ದೊಡ್ಡ ತೊಡಕಾಗಿ ಪರಿಣಮಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಅನುಪಾತದ ಅನುದಾನ ಹಂಚಿಕೆಯ ನಿಯಮವಿದ್ದರೂ, ಎಂಐಡಿಎಚ್ ಮಾರ್ಗಸೂಚಿಯಂತೆ ಕೇವಲ ಔಷಧಿ ವೆಚ್ಚಕ್ಕೆ ಶೇ.30ರಷ್ಟು ಸಹಾಯಧನ ನೀಡಲು ಮಾತ್ರ ಅವಕಾಶವಿದೆ. ಆದರೆ, ತಜ್ಞರ ಸಮಿತಿ ಶಿಫಾರಸು ಮಾಡಿದ್ದ ರೋಗಪೀಡಿತ ಭಾಗಗಳ ತೆಗೆಯುವಿಕೆ, ಸಸ್ಯ ಸಂರಕ್ಷಣಾ ಕ್ರಮಗಳು ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆಗೆ ಈ ಮಿಷನ್‌ನಲ್ಲಿ ಅವಕಾಶವಿಲ್ಲದಿರುವುದು ಯೋಜನೆಯ ಆಶಯಕ್ಕೆ ತಣ್ಣೀರು ಎರಚಿದಂತಾಗಿದೆ.
‘ಈಗಾಗಲೇ 2024-25 ಮತ್ತು 2025-26ನೇ ಸಾಲಿನಲ್ಲಿ ರೋಗವು ಮತ್ತಷ್ಟು ಉಲ್ಬಣಿಸಿದ್ದು, ಅಡಿಕೆ ಮರಗಳು ಶಕ್ತಿ ಕಳೆದುಕೊಂಡು ಇಳುವರಿ ತೀವ್ರವಾಗಿ ಕುಸಿದಿದೆ. ಜಿಲ್ಲೆಗೆ ಔಷಧಿ ಸಹಾಯಧನಕ್ಕಾಗಿ ₹1.36 ಕೋಟಿ ಬಿಡುಗಡೆಯಾಗಿದ್ದರೂ, ಅದು ಯಾವುದಕ್ಕೂ ಸಾಲದು’ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ದುಬಾರಿ ಬೆಲೆಯ ರೋಗನಾಶಕ ಮತ್ತು ಗೊಬ್ಬರ ಕೊಳ್ಳಲು ಶಕ್ತಿ ಇಲ್ಲದೆ ನಾವು ಸಾಲದ ಸುಳಿಗೆ ಸಿಲುಕುತ್ತಿದ್ದೇವೆ. ಇಂತಹ ಸಮಯದಲ್ಲಿ ಸಮಗ್ರ ಪ್ಯಾಕೇಜ್ ಬಿಡುಗಡೆಯಾಗಿದ್ದರೆ ಆಸರೆಯಾಗುತ್ತಿತ್ತು. ಅದನ್ನು ಬಿಟ್ಟು ಕೇವಲ ಶೇ.30ರಷ್ಟು ಔಷಧಿ ಸಹಾಯಧನ ನೀಡುವುದು ರೈತರ ಕಣ್ಣೊರೆಸುವ ತಂತ್ರವಾಗಿದೆ. ಸರ್ಕಾರವು ಕೂಡಲೇ ಈ ತಾಂತ್ರಿಕ ತೊಡಕುಗಳನ್ನು ನಿವಾರಿಸಿ ವಿಶೇಷ ಪ್ಯಾಕೇಜ್‍ಅನ್ನು ಮೂಲ ಸ್ವರೂಪದಲ್ಲೇ ಜಾರಿಗೊಳಿಸದಿದ್ದರೆ ಅಡಿಕೆ ಕೃಷಿ ಅಳಿವಿನ ಹಾದಿ ಹಿಡಿಯುವುದು ನಿಶ್ಚಿತವಾಗಿದೆ’ ಎಂಬುದು ಅಡಿಕೆ ಬೆಳೆಗಾರ ಆತಂಕದ ಮಾತಾಗಿದೆ.
ಉತ್ಪಾದನೆ ಇನ್ನಷ್ಟು ಕುಸಿತದ ಭೀತಿ
‘ಎಲೆಚುಕ್ಕಿ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದೆ. ಗಾಳಿಯ ಮೂಲಕ ಹರಡುವ ಈ ಶಿಲೀಂದ್ರ ರೋಗವು ಒಂದೇ ತೋಟಕ್ಕೆ ಸೀಮಿತವಾಗದೆ ಸುತ್ತಮುತ್ತಲಿನ ಆರೋಗ್ಯವಂತ ತೋಟಗಳಿಗೂ ವ್ಯಾಪಿಸುತ್ತಿದೆ. ಇದು ಕೇವಲ ಒಬ್ಬ ರೈತನ ಸಮಸ್ಯೆಯಾಗಿ ಉಳಿಯದೆ ಇಡೀ ರಾಜ್ಯದ ಅಡಿಕೆ ಉದ್ಯಮಕ್ಕೆ ಹೊಡೆತ ನೀಡುವ ಮುನ್ಸೂಚನೆಯಾಗಿದೆ. ಒಂದು ವೇಳೆ ನಿಯಮಾವಳಿ ಸರಳೀಕರಿಸಿ ಈ ನಿರ್ವಹಣಾ ಪ್ಯಾಕೇಜ್ ಶೀಘ್ರವಾಗಿ ಅನುಷ್ಠಾನಕ್ಕೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಅಡಿಕೆ ಉತ್ಪಾದನೆ ಅರ್ಧದಷ್ಟು ಕುಸಿಯುವ ಭೀತಿ ಇದೆ’ ಎಂಬುದು ಅಡಿಕೆ ಬೆಳೆಗಾರರ ಆತಂಕದ ಮಾತಾಗಿದೆ.
ತೋಟಗಾರಿಕಾ ಸಮಗ್ರ ಅಭಿವೃದ್ಧಿ ಮಿಷನ್ ನಿಯಮಾವಳಿ ಸರಳೀಕರಿಸಿ ಅದರಲ್ಲಿ ತೋಟಗಾರಿಕಾ ಸಮಗ್ರ ನಿರ್ವಹಣೆಯ ಅಂಶ ಸೇರಿಸಿ ರೈತರಿಗೆ ಅನುಕೂಲ ಮಾಡುವ ಕಾರ್ಯ ಸರ್ಕಾರಗಳಿಂದ ಆಗಬೇಕುನಾಗರಾಜ ಹೆಗಡೆ, ಅಡಿಕೆ ಬೆಳೆಗಾರ
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ತೋಟಗಾರಿಕಾ ಬೆಳೆಗಳ ಸಮಗ್ರ ನಿರ್ವಹಣೆಗೆ ಶೇ 30ರಂತೆ ಪ್ರತಿ ಹೆಕ್ಟೆರ್ ಗೆ ₹1500ರಂತೆ 2 ಹೆಕ್ಟೇರ್ ವರೆಗೆ ₹3000 ಸಹಾಯಧನ ನೀಡಲಾಗುತ್ತಿದೆಬಿ.ಪಿ.ಸತೀಶ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.