
ಶಿರಸಿ: ‘ಬಹುವಾರ್ಷಿಕ ಬೆಳೆಗಳಲ್ಲಿ ಒಮ್ಮೆ ರೋಗ ಕಾಣಿಸಿಕೊಂಡರೆ ಅದರ ಸಂಪೂರ್ಣ ನಿರ್ಮೂಲನೆ ಕಷ್ಟಸಾಧ್ಯ. ಎಲೆಚುಕ್ಕಿ ಕಾಣಿಸಿಕೊಂಡ ಅಡಿಕೆ ಮರಗಳಲ್ಲಿ ತಕ್ಷಣಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಸಾಧ್ಯವಿಲ್ಲದ ಕಾರಣ, ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದೇ ಸದ್ಯಕ್ಕಿರುವ ಏಕೈಕ ಪರಿಹಾರ’ ಎಂದು ಕಾಸರಗೋಡಿನ ಸಿಪಿಸಿಆರ್‌ಐ ವಿಜ್ಞಾನಿ ವಿನಾಯಕ ಹೆಗಡೆ ಅಭಿಪ್ರಾಯಪಟ್ಟರು.
ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳದ ಅಂಗವಾಗಿ ಮಂಗಳವಾರ ನಡೆದ ರೈತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಅಡಿಕೆ ಎಲೆಚುಕ್ಕಿ ರೋಗವು ಹಳೆಯದಾದರೂ, 2016ರಿಂದೀಚೆಗೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಸ್ತುತ ಸುಮಾರು 15 ಬಗೆಯ ಶಿಲೀಂದ್ರಗಳು ಈ ರೋಗಕ್ಕೆ ಕಾರಣವಾಗುತ್ತಿವೆ. ರೋಗದ ಆರಂಭಿಕ ಹಂತದಲ್ಲೇ ಅಂತರವ್ಯಾಪಿ ಶಿಲೀಂದ್ರನಾಶಕಗಳನ್ನು ಸಿಂಪಡಿಸುವುದು ಅಗತ್ಯವಾಗಿದೆ. ಈ ಹಿಂದೆ ಕರೊನಾ ಸಾಂಕ್ರಾಮಿಕದ ವೇಳೆ ಮನುಷ್ಯರು ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ರೋಗದಿಂದ ಮುಕ್ತವಾದರೋ ಅದೇ ಮಾದರಿಯಲ್ಲಿ ಸಾಮೂಹಿಕವಾಗಿ ಕ್ರಮವಹಿಸುವ ಅಗತ್ಯವಿದೆ’ ಎಂದರು.
‘ಈಗಾಗಲೇ ಸಿಪಿಸಿಆರ್‌ಐ ವತಿಯಿಂದ ಕೈಗೊಳ್ಳಲಾದ ಪ್ರಾಯೋಗಿಕ ನಿರ್ವಹಣಾ ಕ್ರಮಗಳು ಫಲಿತಾಂಶ ನೀಡುತ್ತಿವೆಯಾದರೂ ಪೂರ್ಣ ಪ್ರಮಾಣದ ಯಶಸ್ಸು ಸಾಧ್ಯವಾಗಿಲ್ಲ. ರೈತರ ತೋಟಗಾರಿಕಾ ಕ್ಷೇತ್ರಗಳಲ್ಲಿ ಸಂಶೋಧನೆಗಳು ಮುಂದುವರಿಯುತ್ತಿದ್ದರೂ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಆದರೆ ಮುಂಬರುವ ವರ್ಷಗಳಲ್ಲಿ ಮರಗಳ ರೋಗನಿರೋಧಕ ಶಕ್ತಿ ವೃದ್ಧಿಸುವ ಕೆಲಸವಾದರೆ ಈ ರೋಗದ ಪರಿಣಾಮವನ್ನು ಅಲ್ಪ ಮಟ್ಟಿಗೆ ತಗ್ಗಿಸಲು ಸಾಧ್ಯವಿದೆ ’ ಎಂದು ಅವರು ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ.ಪಿ.ಸತೀಶ ಮಾತನಾಡಿ, ‘ರೋಗ ನಿರ್ಮೂಲನೆಗಿಂತ ನಿರ್ವಹಣೆಯತ್ತ ರೈತರು ಗಮನಹರಿಸಬೇಕು. ವಿಜ್ಞಾನಿಗಳು ಶಿಫಾರಸು ಮಾಡಿದ ಔಷಧಗಳನ್ನು ಮಾತ್ರ ಬಳಸುವ ಮೂಲಕ ಜಾಗರೂಕತೆ ವಹಿಸಬೇಕು’ ಎಂದರು. ವಿಷಯ ತಜ್ಞ ವಿಜಯೇಂದ್ರ ಹೆಗಡೆ ಮಾತನಾಡಿ, ‘ಅಡಿಕೆಗೆ ಪರ್ಯಾಯವಾಗಿ ಕಾಳುಮೆಣಸು ಹಾಗೂ ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಭಾಗದಲ್ಲಿ ಉತ್ತಮವಾಗಿ ಬೆಳೆಯುತ್ತಿರುವ ಕಾಫಿಯನ್ನು ವೈಜ್ಞಾನಿಕವಾಗಿ ಬೆಳೆದು ಆರ್ಥಿಕ ಲಾಭ ಗಳಿಸಬಹುದು’ ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ಶ್ರೀಧರ ಭಟ್ ಚವತ್ತಿ ಮಾತನಾಡಿ, ‘ತೋಟದಲ್ಲಿ ಮಿಶ್ರ ಬೆಳೆಗಳ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಬೇಕು. ಮಣ್ಣಿನ ಗುಣ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಬೇಸಾಯ ಮಾಡುವುದರಿಂದ ಉತ್ತಮ ಫಸಲು ಪಡೆಯಲು ಸಾಧ್ಯ’ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿ ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಗಣೇಶ ಹೆಗಡೆ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.