
ಶಿರಸಿ: ಅಡಿಕೆಗೆ ಮಾರುಕಟ್ಟೆಯಲ್ಲಿ ಕೆಂಪಡಿಕೆ ದರ ಏರಿಕೆ ಹಾದಿಯಲ್ಲಿದ್ದರೂ ಮಾರಾಟಕ್ಕೆ ಹೆಚ್ಚಿನ ಅಡಿಕೆ ಆವಕ ಆಗುತ್ತಿಲ್ಲ. ಕಾರಣ ಕೆಂಪಡಿಕೆ ಸಿದ್ಧಪಡಿಸಲು ಆಗಾಗ ಬರುವ ಮಳೆ ಹಾಗೂ ಮೋಡದ ವಾತಾವರಣವು ಬೆಳೆಗಾರರಿಗೆ ಅವಕಾಶವನ್ನೇ ನೀಡುತ್ತಿಲ್ಲ.
ಪ್ರಸಕ್ತ ವರ್ಷ ಕೆಂಪಡಿಕೆ ಹಂಗಾಮಿನ ಆರಂಭದಲ್ಲಿ ಉತ್ತಮ ದರವಿದ್ದರೂ ಸಹ ಮೋಡ ಹಾಗೂ ಮಳೆಯ ವಾತಾವರಣದಿಂದ ಸಿದ್ಧಪಡಿಸುವಿಕೆ ವಿಳಂಬ ಆಗುತ್ತಿದೆ. ಕಳೆದ ವರ್ಷಗಳಲ್ಲಿ ನವಂಬರ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಹೊಸ ರಾಶಿ ಅಡಿಕೆ ಆವಕ ಆಗಿತ್ತು. ಪ್ರಸಕ್ತ ಸಾಲಿನಲ್ಲಿ ಇನ್ನೂ ಸಿದ್ಧಪಡಿಸುವ ಹಂತದಲ್ಲಿದ್ದು, ಇದರಿಂದ ಡಿಸೆಂಬರ್, ಜನವರಿ ತಿಂಗಳಲ್ಲಿ ಒಮ್ಮೆಲೇ ಮಾರುಕಟ್ಟೆಗೆ ಅಡಿಕೆ ಮಾರಾಟಕ್ಕೆ ಬರುವುದರಿಂದ ದರ ಇಳಿಕೆಯ ಆತಂಕ ಬೆಳೆಗಾರರನ್ನು ಕಾಡುವಂತಾಗಿದೆ.
'ದೀಪಾವಳಿ, ತುಳಸಿ ವಿವಾಹದ ನಂತರದ ದಿನಗಳು ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಕೆಂಪಡಿಕೆ (ರಾಶಿ) ಸಿದ್ಧಪಡಿಸುವ ಹಂಗಾಮಾಗಿದೆ. ಹಸಿ ಅಡಿಕೆ ಸುಲಿದು, ಬೇಯಿಸಿ ನಂತರ ಕನಿಷ್ಠ 10ರಿಂದ 12 ದಿನ ಬಿರು ಬಿಸಿಲಿನಲ್ಲಿ ಒಣಗಿಸಿದರೆ ಕೆಂಪಡಿಕೆ ಮಾರಲು ಸಿದ್ಧವಾಗುತ್ತದೆ. ಆದರೆ, ಒಂದೆರಡು ದಿನ ಬಿಸಿಲಿದ್ದರೆ ಮತ್ತೆರಡು ದಿನ ಮೋಡ, ಮಳೆ ಆಗುತ್ತಿದೆ. ಕಾರಣ ಕೆಂಪಡಿಕೆ ಸಿದ್ಧಪಡಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ' ಎನ್ನುತ್ತಾರೆ ಬೆಳೆಗಾರ ಮಹಾಬಲೇಶ್ವರ ಭಟ್.
'ಕ್ವಿಂಟಲ್ ಕೆಂಪಡಿಕೆಗೆ ₹55 ಸಾವಿರದಿಂದ ₹60 ಸಾವಿರ ಸರಾಸರಿ ದರವಿದೆ. ಇದು ಹೆಚ್ಚು ದಿನ ಇರುವ ದರವಲ್ಲ. ಮಾರುಕಟ್ಟೆಗೆ ಆವಕ ಹೆಚ್ಚಿದಂತೆ ದರ ಇಳಿಕೆ ನಿಶ್ಚಿತ. ಹೀಗಾಗಿ ಬೆಳೆಗಾರರು ತ್ವರಿತವಾಗಿ ಕೆಂಪಡಿಕೆ ಸಿದ್ಧಪಡಿಸಲು ತಯಾರಿಯಲ್ಲಿದ್ದಾರೆ. ಕೆಲವರು ಈಗಾಗಲೇ ಕೊಯ್ಲು ಮಾಡಿದ್ದು, ಪ್ರಸ್ತುತ ವ್ಯತಿರಿಕ್ತ ಹವಾಮಾನದ ಕಾರಣಕ್ಕೆ ತೊಂದರೆಗೆ ಸಿಲುಕಿದ್ದಾರೆ' ಎನ್ನುತ್ತಾರೆ ಅವರು.
'ಕೆಂಪಡಿಕೆಗೆ ಉತ್ತರ ದರವಿರುವ ಕಾರಣ ಅಡಿಕೆ ಕೊಯ್ಲು ಆರಂಭಿಸಿದ್ದೆ. ಆದರೆ ಕೆಂಪಡಿಕೆ ಒಣಗಲು ಸರಿಯಾದ ಬಿಸಿಲು ಇಲ್ಲ. ಹೀಗಾಗಿ ಅಡಿಕೆ ಗುಣಮಟ್ಟ ಕಳಪೆಯಾಗುವ ಸಾಧ್ಯತೆಯಿದೆ. ಪ್ರಸಕ್ತ ವರ್ಷ ಇಳುವರಿಯೂ ಕಡಿಮೆಯಿದ್ದು, ಎರಡನೇ ಹಂತದಲ್ಲಿ ಕೆಂಪಡಿಕೆ ಮಾಡುವಷ್ಟು ಬೆಳೆಯೂ ಇಲ್ಲ. ಈಗಾಗಲೇ ಮಳೆಗಾಳಿಗೆ ಉದುರಿದ ಅಡಿಕೆಯನ್ನು ಒಣಗಿಸಲು ಆಗದೆ ಎಲ್ಲ ಕೊಳೆತು ನಷ್ಟವಾಗಿತ್ತು' ಎಂದು ಹುಲೇಕಲ್‍ನ ಅಡಿಕೆ ಬೆಳೆಗಾರ ನಾಗೇಶ ನಾಯ್ಕ ಹೇಳಿದರು.
ದೊಡ್ಡ ಬಜೆಟ್: ಸಣ್ಣವರಿಗೆ ಸಮಸ್ಯೆ
20/20 ಅಳತೆಯ ವ್ಯವಸ್ಥಿತ ಪಾಲಿಹೌಸ್ ನಿರ್ಮಿಸಲು ₹2ಲಕ್ಷದಿಂದ ₹3ಲಕ್ಷ ವೆಚ್ಚವಾಗುತ್ತದೆ. ತೋಟಗಾರಿಕಾ ಇಲಾಖೆಯಲ್ಲಿ ಸಹಾಯಧನ ಕೂಡ ಇದಕ್ಕೆ ಲಭ್ಯವಿಲ್ಲ. ಅಡಿಕೆ ಒಣಗಿಸುವಷ್ಟು ದೊಡ್ಡ ಪ್ರಮಾಣದ ಡ್ರೈಯರ್ ಕೂಡ ಹೆಚ್ಚಿನ ಮೊತ್ತದ್ದೇ ಆಗಿದೆ. ಹೀಗಾಗಿ ಸಣ್ಣ ಹಾಗೂ ಮಧ್ಯಮ ವರ್ಗದ ಬೆಳೆಗಾರರು ಬಿಸಿಲನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಸರ್ಕಾರ ಪಾಲಿಹೌಸ್ ನಿರ್ಮಾಣಕ್ಕೆ ಡ್ರೈಯರ್ ನಿರ್ಮಿಸಲು ಸಹಾಯಧನ ನೀಡಲು ಕ್ರಮವಹಿಸಬೇಕು ಎಂಬುದು ಬಹುತೇಕ ಅಡಿಕೆ ಬೆಳೆಗಾರರ ಆಗ್ರಹವಾಗಿದೆ.
ಕಳೆದ ವರ್ಷ ಈ ವೇಳೆಗೆ ಮಾರುಕಟ್ಟೆ ಬಂದ ಉತ್ಪನ್ನದ ಆವಕದ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 30ರಷ್ಟೂ ಉತ್ಪನ್ನ ಮಾರಾಟಕ್ಕೆ ಬಂದಿಲ್ಲ.-ವಿನಯ ಹೆಗಡೆ, ಟಿಎಂಎಸ್ ಪ್ರಧಾನ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.