ADVERTISEMENT

ಕಲಾ ಪ್ರದರ್ಶನ ನೈತಿಕತೆ ಬಿತ್ತಬೇಕು: ಕೊಳಗಿ ಅಭಿಮತ

ಲಯನ್ಸ್ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:50 IST
Last Updated 11 ಜುಲೈ 2025, 4:50 IST
ಶಿರಸಿಯ ಲಯನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡ ಕಲಾ ವೈವಿಧ್ಯಗಳ ಸಮಾಗಮ ಸಾಂಸ್ಕೃತಿಕ ಸೌರಭದಲ್ಲಿ ಕೇಶವ ಹೆಗಡೆ ಕೊಳಗಿ ಅವರನ್ನು ಸನ್ಮಾನಿಸಲಾಯಿತು
ಶಿರಸಿಯ ಲಯನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡ ಕಲಾ ವೈವಿಧ್ಯಗಳ ಸಮಾಗಮ ಸಾಂಸ್ಕೃತಿಕ ಸೌರಭದಲ್ಲಿ ಕೇಶವ ಹೆಗಡೆ ಕೊಳಗಿ ಅವರನ್ನು ಸನ್ಮಾನಿಸಲಾಯಿತು   

ಶಿರಸಿ: ‘ಕಲಾ ಪ್ರದರ್ಶನಗಳು ವ್ಯಕ್ತಿಗಳಲ್ಲಿ ನೈತಿಕತೆ ಬಿತ್ತಬೇಕು. ಪೌರಾಣಿಕ ಆಖ್ಯಾನಗಳು ಈ ಕಾರ್ಯ‌ ಮಾಡುತ್ತವೆ’ ಎಂದು ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಕಲಾ ವೈವಿಧ್ಯಗಳ ಸಮಾಗಮ ಸಾಂಸ್ಕೃತಿಕ ಸೌರಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಯಕ್ಷಗಾನದಲ್ಲಿ ವ್ಯಕ್ತಿ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಕಥೆಗಳು ತಿಳಿಸುತ್ತವೆ. ರಾಮಾಯಣದಲ್ಲಿ ತಂದೆಯನ್ನು ಹೇಗೆ ನೋಡಿಕೊಳ್ಳಬೇಕು ಎಂದು ರಾಮನನ್ನು ನೋಡಿ, ಲಕ್ಷ್ಮಣನನ್ನು‌ ನೋಡಿ ಸಹೋದರರು ಹೇಗಿರಬೇಕು ಎಂಬುದನ್ನೂ ತಿಳಿಯಬಹುದು. ಹೇಗಿರಬಾರದು ಎಂಬುದಕ್ಕೆ ರಾವಣನ ಪಾತ್ರ ಉದಾಹರಣೆಗೆ ಸಿಗುತ್ತವೆ’ ಎಂದು ವಿವರಿಸಿದರು.

ADVERTISEMENT

‘ಕಲೆಯಿಂದ ಸಂಸ್ಕೃತಿಗಳ ಉಳಿವು. ಕಲೆಯ‌ ಉಳಿವು ಪ್ರದರ್ಶನಗಳಿಂದ ಮಾತ್ರ. ಆದ್ದರಿಂದ ಕಲಾ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸರ್ಕಾರ ಅನುದಾನ‌ ನೀಡುವುದನ್ನು ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ‌ ಪ್ರಭಾಕರ ಹೆಗಡೆ, ‘ಕಲೆ, ಸಂಸ್ಕೃತಿ ಉಳಿಸುವು‌ದು ಎಲ್ಲರ ಜವಾಬ್ದಾರಿ’ ಎಂದರು.

ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ‌ ಮಂಗಲಾ ನಾಯ್ಕ, ‘ನಾಡಿನ ಪರಂಪರೆ ಉಳಿಸಿ ಬೆಳಸಿಕೊಂಡು ಹೋಗಬೇಕು ಎಂಬ ಆಶಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಪ್ರಾಚಾರ್ಯ ಶಶಾಂಕ ಹೆಗಡೆ, ಪ್ರವೀಣ ಮಣ್ಮನೆ ಇದ್ದರು.

ವೈವಿಧ್ಯಮಯ ಕಾರ್ಯಕ್ರಮ:

ಕಾರ್ಯಕ್ರಮದ ಅಂಗವಾಗಿ ರಾಯಚೂರಿನ ಮಹಾಲಕ್ಷ್ಮೀ ಹಾಗೂ ಸುಧಾಕರ ಬಳಗದಿಂದ ಸುಗಮ ಸಂಗೀತ ವಿ.ಉಮಾಕಾಂತ ಭಟ್ ಕೆರೇಕೈ ಜಾನಕಿ ಹೆಗಡೆ ಅವರಿಂದ ಗಮಕ ವಾಚನ ಗಾಯಕಿ ದೀಪಾ ಶಶಾಂಕ ಹೆಗಡೆ ಅವರಿಂದ ಹಿಂದುಸ್ತಾನಿ ಗಾಯನ ರಾಜೇಶ್ವರಿ ಹೆಗಡೆ ತಂಡದಿಂದ ಜಾನಪದ ಗೀತೆ ವಸುಮತಿ ಹೆಗಡೆ ತಂಡದಿಂದ ನೃತ್ಯ ರೂಪಕ ವಿಘ್ನೇಶ್ವರ ಗೌಡ ತಂಡದಿಂದ‌ ಡೊಳ್ಳು ಕುಣಿತ ಗಣಪತಿ ಗೌಡ ತಂಡದಿಂದ ಭಜನಾ ಕೋಲಾಟ ಸಚಿನ್ ಗೌಡ ತಂಡದಿಂದ ಕೋಲಾಟ ಅನಿರುದ್ಧ ವರ್ಗಾಸರ ತಂಡದಿಂದ ಯಕ್ಷಗಾನ ನಡೆದವು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಗರಾಜ ಜೋಶಿ‌ ನಿರ್ವಹಿಸಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.